ADVERTISEMENT

2ನೇ ಮಹಾಯುದ್ಧದ ಕಾಲದ ಬಾಂಬ್‌ ಪತ್ತೆ

ಎಪಿ
Published 20 ಸೆಪ್ಟೆಂಬರ್ 2025, 16:29 IST
Last Updated 20 ಸೆಪ್ಟೆಂಬರ್ 2025, 16:29 IST
   

ಹಾಂಗ್‌ಕಾಂಗ್: ಹಾಂಗ್‌ಕಾಂಗ್‌ನ ಕ್ವಾರಿ ಬೇ ಎಂಬ ಪ್ರದೇಶದಲ್ಲಿ ಎರಡನೇ ಮಹಾಯುದ್ಧದ ಸಂದರ್ಭದ 450 ಕೆಜಿ ತೂಕದ ಅಮೆರಿಕ ನಿರ್ಮಿತ ಬಾಂಬ್‌ ಪತ್ತೆಯಾಗಿದೆ. ಅದನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದಾಗಿ ಆಡಳಿತವು ರಾತ್ರೋ ರಾತ್ರಿ ಸಾವಿರಾರು ಮಂದಿಯನ್ನು‍ ಸ್ಥಳಾಂತರಿಸಿರುವುದಾಗಿ ತಿಳಿಸಿದೆ. 

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ 1.5 ಮೀಟರ್ ಉದ್ದದ ಬಾಂಬ್‌ ಪತ್ತೆಯಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ ಅಧಿಕಾರಿಗಳು ಇದು ಎರಡನೇ ಮಹಾಯುದ್ಧದ ಸಂದರ್ಭದ ಬಾಂಬ್ ಎಂಬುದನ್ನು ದೃಢಪಡಿಸಿದ್ದಾರೆ.

ಬಾಂಬ್‌ ನಿಷ್ಕ್ರಿಯ ಕಾರ್ಯಾಚರಣೆ ವೇಳೆ ಸಂಭವಿಸಬಹುದಾದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಆ ಪ್ರದೇಶದಲ್ಲಿ ಸುಮಾರು 1,900 ಕುಟುಂಬಗಳ 6,000 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಶುಕ್ರವಾರ ತಡರಾತ್ರಿ ಶುರುವಾದ ಬಾಂಬ್‌ ನಿಷ್ಕ್ರಿಯ ಕಾರ್ಯಾಚರಣೆ ಶನಿವಾರ ಬೆಳಿಗ್ಗೆ 11.30ರ ವರೆಗೆ ನಡೆದು, ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಾಂಗ್‌ಕಾಂಗ್‌ ಪ್ರದೇಶವು ಜಪಾನ್ ಪಡೆಗಳ ವಶದಲ್ಲಿತ್ತು. ಅಲ್ಲದೇ, ಮಿಲಿಟರಿ ನೆಲೆ ಕೂಡ ಆಗಿತ್ತು. ಹೀಗಾಗಿ ಈ ಪ್ರದೇಶಗಳಲ್ಲಿ ಆಗಾಗ 2ನೇ ಮಹಾಯುದ್ಧದ ಕಾಲದ ಬಾಂಬ್‌ಗಳು ಪತ್ತೆಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.