ADVERTISEMENT

ಸಿಬ್ಬಂದಿ ಕಡಿತ: ಅತಂತ್ರರಾದ ಐ.ಟಿ ವೃತ್ತಿಪರರು; ನಿರುದ್ಯೋಗಿಗಳಾದ 2 ಲಕ್ಷ ಮಂದಿ

ದೈತ್ಯ ಸಂಸ್ಥೆಗಳಿಂದ ಉದ್ಯೋಗಕ್ಕೆ ಕತ್ತರಿ *

ಪಿಟಿಐ
Published 23 ಜನವರಿ 2023, 14:09 IST
Last Updated 23 ಜನವರಿ 2023, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌ (ಪಿಟಿಐ): ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವ ದೈತ್ಯ ಐ.ಟಿ. ಕಂಪನಿಗಳ ದಿಢೀರ್ ಕ್ರಮದಿಂದಾಗಿ ಅಮೆರಿಕದಲ್ಲಿ ನೆಲೆಯೂರಿರುವ ಭಾರತದ ಸಾವಿರಾರು ಐ.ಟಿ ಉದ್ಯೋಗಿಗಳು ಈಗ ಅತಂತ್ರರಾಗಿದ್ದಾರೆ.

ವಾಷಿಂಗ್ಟನ್‌ ಪೋಸ್ಟ್‌ ದೈನಿಕದ ಪ್ರಕಾರ, 2022ರ ನವೆಂಬರ್‌ನಿಂದ ಈವರೆಗೆ ಸುಮಾರು 2 ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರಲ್ಲಿ ಶೇ 30 ರಿಂದ 40ರಷ್ಟು ಮಂದಿ ಭಾರತೀಯರು. ಬಹುತೇಕ ಮಂದಿ ಗೂಗಲ್‌, ಮೈಕ್ರೊಸಾಫ್ಟ್‌, ಫೇಸ್‌ಬುಕ್‌ ಮತ್ತು ಅಮೆಜಾನ್ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇದ್ದರು. ಹೆಚ್ಚಿನವರು ಎಚ್‌–1ಬಿ ಮತ್ತು ಎಲ್‌1 ವೀಸಾ ಹೊಂದಿದವರಾಗಿದ್ದಾರೆ.

ಗೂಗಲ್‌, ಮೈಕ್ರೋಸಾಫ್ಟ್, ಅಮೆಜಾನ್‌ ಸೇರಿದಂತೆ ಪ್ರಮುಖ ಐ.ಟಿ. ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿವೆ. ದೇಶದಲ್ಲಿಯೇ ಉಳಿಯಲು ವೀಸಾ ಊರ್ಜಿತವಿರುವ ಅವಧಿಯೊಳಗೆ ಹೊಸ ಉದ್ಯೋಗವನ್ನು ಹುಡುಕಿಕೊಳ್ಳಲೇಬೇಕಾದ ಹೊಸ ಸವಾಲು ಈಗ ಅವರ ಮುಂದಿದೆ.

ADVERTISEMENT

ಎಚ್‌–1ಬಿ ವಲಸಿಗಯೇತರ ವೀಸಾ ಆಗಿದೆ. ಅಮೆರಿಕದ ಕಂಪನಿಗಳು ವಿಶೇಷ ಪರಿಣತಿ ಬಯಸುವ ಹುದ್ದೆಗಳಿಗೆ ತಾಂತ್ರಿಕ ಪರಿಣತಿಯನ್ನು ಆಧರಿಸಿ ವಿದೇಶಿಯರನ್ನು ನೇಮಿಸಿಕೊಳ್ಳಲು ಇದು ಅನುವು ಮಾಡಿಕೊಡಲಿದೆ. ಇಂತ ಹುದ್ದೆಗಳಿಗೆ ತಾಂತ್ರಿಕ ಪರಿಣತಿ ಆಧರಿಸಿ ಭಾರತ, ಚೀನಾದ ಸಾವಿರಾರು ಮಂದಿ ನೇಮಕಗೊಳ್ಳುತ್ತಾರೆ.

ವಿಶೇಷ ಜ್ಞಾನ ಅಥವಾ ವ್ಯವಸ್ಥಾಪನಾ ವಿಭಾಗದಲ್ಲಿನ ಹುದ್ದೆಗಳಲ್ಲಿ ಇರುವವರನ್ನು ತಾತ್ಕಾಲಿಕವಾಗಿ ಕಂಪನಿ ತನ್ನ ವಿವಿಧ ಶಾಖೆಗಳಿಗೆ ವರ್ಗಾವಣೆ ಮಾಡಲು ಪೂರಕವಾಗಿ ಎಲ್‌–1ಎ ಮತ್ತು ಎಲ್‌ –1ಬಿ ವೀಸಾ ನೀಡಲಾಗುತ್ತದೆ.

ಭಾರತದ ಉದ್ಯೋಗಿಗಳ ಪೈಕಿ ಗಣನೀಯ ಸಂಖ್ಯೆಯ ಉದ್ಯೋಗಿಗಳು ವಲಸಿಗಯೇತರ ಕಾರ್ಯಕ್ಷೇತ್ರದಲ್ಲಿ ಎಚ್–1ಬಿ ಮತ್ತು ಎಲ್‌1 ವೀಸಾ ಅನ್ನು ಆಧರಿಸಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಈಗ ಅವರ ವೀಸಾ ಊರ್ಜಿತವಾಗಿ ಇರಬೇಕಾದರೆ ನಿಗದಿತ ಗಡುವಿನ ಒಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಿದೆ.

ಅಮೆಜಾನ್‌ನಲ್ಲಿದ್ದು ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬರು, ‘ಮೂರು ತಿಂಗಳ ಹಿಂದೆ ಅಮೆರಿಕಕ್ಕೆ ಬಂದಿದ್ದೆ. ಮಾರ್ಚ್‌ 20 ನಿಮ್ಮ ಕೆಲಸದ ಕೊನೆಯ ದಿನ ಎಂದು ತಿಳಿಸಿದ್ದಾರೆ. ಏನು ಮಾಡಲಿ?’ ಎನ್ನುತ್ತಾರೆ.

ಎಚ್‌ –1ಬಿ ವೀಸಾ ಹೊಂದಿದವರ ಸ್ಥಿತಿ ಹೆಚ್ಚು ಶೋಚನೀಯವಾಗಿದೆ. 60 ದಿನದಲ್ಲಿ ಕೆಲಸ ಹುಡುಕಿಕೊಳ್ಳಲೇ ಬೇಕಾದ ಅನಿವಾರ್ಯತೆಯಿದೆ. ಈ ಅವಧಿಯಲ್ಲಿ ಕೆಲಸ ಸಿಗದಿದ್ದರೆ ಭಾರತಕ್ಕೆ ವಾಪಸಾಗದೆ ಬೇರೆ ದಾರಿಯೇ ಇಲ್ಲ.

ಬಹುತೇಕ ಐ.ಟಿ. ಕಂಪನಿಗಳು ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವುದಕ್ಕೆ ಈಗ ಹೆಚ್ಚು ಒತ್ತು ನೀಡಿವೆ. ಈಗಿನ ಸಂದರ್ಭದಲ್ಲಿ, ಅಲ್ಪಾವಧಿಯಲ್ಲಿ ಹೊಸ ಕೆಲಸ ಸಿಗುವುದು ಕಷ್ಟಕರ ಎಂಬುದು ಹೆಚ್ಚಿನವರ ಅಭಿಮತ.

‘ನಾನು ಜ.18ರಂದು ಕೆಲಸ ಕಳೆದುಕೊಂಡಿದ್ದು ಪರಿಸ್ಥಿತಿ ಗಂಭೀರವಾಗಿದೆ. ಮಗ ಪ್ರೌಢಶಾಲೆಯಲ್ಲಿದ್ದು, ಕಾಲೇಜಿಗೆ ಸೇರಿಸಬೇಕಿದೆ ಎನ್ನುತ್ತಾರೆ’ ಮೈಕ್ರೋಸಾಫ್‌ನಲ್ಲಿದ್ದು ಕೆಲಸ ಕಳೆದುಕೊಂಡಿರುವ ಮತ್ತೊಬ್ಬ ಗೃಹಿಣಿ.

ಎಚ್‌–1ಬಿ ವೀಸಾ ಹೊಂದಿದ್ದ ಹೆಚ್ಚಿನವರು ಕೆಲಸ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಇದರ ಪರಿಣಾಮ ಕುಟುಂಬ, ಮಕ್ಕಳ ಶಿಕ್ಷಣದ ಮೇಲೆ ಬೀರುತ್ತಿದೆ. ಐ.ಟಿ ಕಂಪನಿಗಳು ಕೆಲ ದಿನಗಳ ಮಟ್ಟಿಗೆ ರಿಯಾಯಿತಿ ನೀಡಬೇಕು ಎನ್ನುತ್ತಾರೆ ಉದ್ಯಮಿ ಅಜಯ್ ಜೈನ್ ಭುಟೋರಿಯ.

ತಾಂತ್ರಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಉದ್ಯೋಗಿಗಳ ಕಡಿತದಿಂದಾಗಿ 2023ರ ಜನವರಿ ತಿಂಗಳು ವೃತ್ತಿಪರರಿಗೆ ಕ್ರೂರವಾಗಿದೆ. ಅನೇಕ ಪ್ರತಿಭಾನ್ವಿತರು ಕೆಲಸ ಕಳೆದುಕೊಂಡಿದ್ದಾರೆ. ತಾಂತ್ರಿಕ ಕ್ಷೇತ್ರವು ಬಹುತೇಕ ಭಾರತೀಯರನ್ನೇ ಅವಲಂಬಿಸಿರುವ ಕಾರಣ, ಇದರ ಪರಿಣಾಮ ಅವರ ಮೇಲೆ ಬೀರುತ್ತಿದೆ ಎಂದು ಹೇಳಿದರು.

ಕೆಲಸ ಹುಡುಕಲು ಸಂಘಟನೆಗಳ ನೆರವು

ವಾಷಿಂಗ್ಟನ್‌ (ಪಿಟಿಐ) ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ವೃತ್ತಿಪರರಿಗೆ ನೆರವಾಗಲು ವಿವಿಧ ಉದ್ಯಮ ಮತ್ತು ಸಮುದಾಯ ಆಧರಿತ ಸಂಘಟನೆಗಳು ಮುಂದಾಗಿವೆ.

ಉದ್ಯೋಗಾಂಕ್ಷಿಗಳು ಮತ್ತು ಉದ್ಯೋಗದಾತ ಸಂಸ್ಥೆಗಳ ನಡುವೆ ಸಂಪರ್ಕ ಸೇತುವಾಗಲು ಕ್ರಮವಹಿಸಿವೆ. ಭಾರತೀಯ ಜಾಗತಿಕ ತಾಂತ್ರಿಕ ವೃತ್ತಿಪರರ ಸಂಘಟನೆ (ಜಿಐಟಿಪಿಆರ್‌ಒ), ಭಾರತ ಮತ್ತು ಭಾರತ ಮೂಲದವರ ಅಧ್ಯಯನ ಪ್ರತಿಷ್ಠಾನವು (ಎಫ್‌ಐಐಡಿಎಸ್‌) ಭಾನುವಾರವಷ್ಟೇ ಇಂಥದೊಂದು ಕಾರ್ಯಕ್ಕೆ ಮುಂದಾಗಿವೆ.

ಅಲ್ಲದೆ, ಪರಿಹಾರ ಮಾರ್ಗೋಪಾಯಗಳನ್ನು ಹುಡುಕಲು ಭಾರತೀಯ ಐ.ಟಿ. ಉದ್ಯೋಗಿಗಳು ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಇಂತದೊಂದು ಗುಂಪಿನಲ್ಲಿ ಕೆಲಸ ಕಳೆದುಕೊಂಡಿರುವ 800 ಮಂದಿ ಇದ್ದಾರೆ. ಉದ್ಯೋಗಾವಕಾಶ ಕುರಿತ ಸಂದೇಶಗಳು ಈ ಗುಂಪಿನಲ್ಲಿ ಹಂಚಿಕೆ ಆಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.