ADVERTISEMENT

ಅಫ್ಗನ್: ಸ್ಫೋಟಕ್ಕೆ ಇಬ್ಬರು ಬಲಿ

ತಾಲಿಬಾನಿ ಸೈನಿಕರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ

ಏಜೆನ್ಸೀಸ್
Published 18 ಸೆಪ್ಟೆಂಬರ್ 2021, 17:04 IST
Last Updated 18 ಸೆಪ್ಟೆಂಬರ್ 2021, 17:04 IST
ಸ್ಫೋಟದ ನಂತರ ನಂಗಾರ್ಹರ್ ಪ್ರಾದೇಶಿಕ ಆಸ್ಪತ್ರೆ ಎದುರು ಬಿಗಿಭದ್ರತೆ ಒದಗಿಸಲಾಗಿತ್ತು- –ಎಎಫ್‌ಪಿ ಚಿತ್ರ
ಸ್ಫೋಟದ ನಂತರ ನಂಗಾರ್ಹರ್ ಪ್ರಾದೇಶಿಕ ಆಸ್ಪತ್ರೆ ಎದುರು ಬಿಗಿಭದ್ರತೆ ಒದಗಿಸಲಾಗಿತ್ತು- –ಎಎಫ್‌ಪಿ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ಜಲಾಲಾಬಾದ್ ನಗರದಲ್ಲಿ ಶನಿವಾರ ನಡೆದ ಮೂರು ಸ್ಫೋಟಗಳಲ್ಲಿ ಇಬ್ಬರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಮೆರಿಕ ಸೇನೆಯು ಅಫ್ಗಾನಿಸ್ತಾನದಿಂದ ಸಂಪೂರ್ಣವಾಗಿ ನಿರ್ಗಮಿಸಿದ ನಂತರ ನಡೆದ ಮೊದಲ ಭೀಕರ ದಾಳಿ ಇದಾಗಿದೆ. ಮೂರು ಬಾಂಬ್‌ ಸ್ಫೋಟಗಳಲ್ಲಿ ಒಂದನ್ನು, ತಾಲಿಬಾನ್‌ ಸೈನಿಕರ ವಾಹನವನ್ನು ಗುರಿ ಮಾಡಿಕೊಂಡು ನಡೆಸಲಾಗಿದೆ.

ಅಫ್ಗಾನಿಸ್ತಾನದ ಬಹುತೇಕ ಪ್ರಾಂತಗಳನ್ನು ವಶಕ್ಕೆ ಪಡೆದುಕೊಂಡಿರುವ ಇಸ್ಲಾಂ ಮೂಲಭೂತವಾದಿ ತಾಲಿಬಾನ್, ದೇಶದಲ್ಲಿ ಭದ್ರತೆಯನ್ನು ಕಾಯ್ದುಕೊಳ್ಳುವುದಾಗಿ ಹೇಳಿತ್ತು. ಆದರೆ ಇಸ್ಲಾಮಿಕ್ ಸ್ಟೇಟ್‌ನ ಅಫ್ಗನ್ ಘಟಕವು ತಾಲಿಬಾನ್ ಅನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದೆ ಎನ್ನಲಾಗಿದೆ. ಆದರೆ, ಶನಿವಾರದ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.

ADVERTISEMENT

‘ನಂಗಾರ್ಹರ್ ಪ್ರಾಂತದ ರಾಜಧಾನಿ ಜಲಾಲಾಬಾದ್‌ನಲ್ಲಿಯೇ ಮೂರು ಸ್ಫೋಟಗಳು ನಡೆದಿವೆ. ನಗರದಲ್ಲಿ ಗಸ್ತು ತಿರುಗುತ್ತಿದ್ದ ತಾಲಿಬಾನ್‌ನ ಸೈನಿಕರ ವಾಹನವನ್ನು ಗುರಿ ಮಾಡಿಕೊಂಡು ಒಂದು ದಾಳಿ ನಡೆಸಲಾಗಿದೆ. ಈ ಮೂರೂ ದಾಳಿಗಳಲ್ಲಿ ಹಲವು ಮಹಿಳೆಯರು ಮತ್ತು ಮಕ್ಕಳಿಗೆ ಗಾಯಗಳಾಗಿವೆ’ ಎಂದು ತಾಲಿಬಾನ್ ಮಾಹಿತಿ ನೀಡಿದೆ. ನಂಗಾರ್ಹರ್ ಪ್ರಾಂತದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಾಬಲ್ಯವಿದೆ.ಹೀಗಾಗಿ ಅವರೇ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಈ ದಾಳಿಗಳಲ್ಲಿ ಮೃತಪಟ್ಟವರ ವಿವರವನ್ನು ತಾಲಿಬಾನ್ ಬಹಿರಂಗಪಡಿಸಿಲ್ಲ. ಆದರೆ ಬಾಂಬ್ ಸ್ಫೋಟದಲ್ಲಿ ಛಿದ್ರವಾಗಿರುವ ತಾಲಿಬಾನ್‌ನ ವಾಹನದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಛಿದ್ರವಾಗಿರುವ ವಾಹನವನ್ನು ತಾಲಿಬಾನಿಗಳು ಪರಿಶೀಲಿಸುತ್ತಿರುವ ಮತ್ತು ವಾಹನದಲ್ಲಿದ್ದ ತಾಲಿಬಾನ್ ಬಾವುಟದ ದೃಶ್ಯಗಳು ಈ ಚಿತ್ರದಲ್ಲಿವೆ.

ಶಿಕ್ಷಕರಷ್ಟೇ ಹಾಜರಾಗಲು ಸೂಚನೆ

ಶನಿವಾರದಿಂದ ದೇಶದಾದ್ಯಂತ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬಾಲಕರಷ್ಟೇ ಹಾಜರಾಗಬೇಕು ಎಂದು ತಾಲಿಬಾನ್ ಸೂಚನೆ ನೀಡಿದೆ. ತಾಲಿಬಾನ್‌ ಕ್ಯಾಲೆಂಡರ್‌ನ ಪ್ರಕಾರ ಶನಿವಾರವು ವಾರದ ಮೊದಲ ದಿನವಾಗಿದೆ. ಈ ಶನಿವಾರದಿಂದಲೇ ಇದನ್ನು ಪಾಲಿಸಬೇಕು ಎಂದು ತಾಲಿಬಾನ್ ಹೇಳಿದೆ.

ತಾಲಿಬಾನ್ ಹೊರಡಿಸಿರುವ ಈ ಸೂಚನೆಯಲ್ಲಿ ಶಿಕ್ಷಕಿಯರು ಮತ್ತು ಬಾಲಕಿಯರ ಉಲ್ಲೇಖವಿಲ್ಲ. ಈ ಮೂಲಕ ಮಹಿಳೆಯರು ಮತ್ತು ಬಾಲಕಿಯರ ಮತ್ತೊಂದು ಪ್ರಮುಖ ಹಕ್ಕನ್ನು ತಾಲಿಬಾನ್ ಕಸಿದುಕೊಂಡಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.