ಟೆಕ್ಸಾಸ್: ಅಮೆರಿಕದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆಯೂ ಅತಿಯಾಗಿದೆ. ಹೀಗಾಗಿ, ಪ್ರಾರ್ಥನಾ ಮಂದಿರ, ಕ್ಯಾಂಟೀನ್, ಕಾಯುವ ಕೊಠಡಿ, ಹಾಲ್, ಪಾರ್ಕಿಂಗ್ ಸ್ಥಳಗಳನ್ನು ಕೋವಿಡ್ ರೋಗಿಗಳ ಚಿಕಿತ್ಸಾ ಕೊಠಡಿಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳ ಪರಿಸ್ಥಿತಿಯು ಹದಗೆಟ್ಟುತ್ತಿದೆ. ಕೋವಿಡ್‌ಗೆ ಬಲಿಯಾದವರ ಸಂಖ್ಯೆಯೂ ಏರಿಕೆಯಾಗಿದೆ.
‘ನಾವು ಖಿನ್ನತೆಗೊಳಗಾಗಿದ್ದೇವೆ. ನಾವು ನಿರಾಶೆಗೊಂಡಿದ್ದೇವೆ. ಬಹಳ ಆಯಾಸವಾಗುತ್ತಿದೆ. ಮನೆಯಿಂದ ಆಸ್ಪತ್ರೆಗೆ ಬರುವಾಗ ದಿನಲೂ ಕಣ್ಣಲ್ಲಿ ನೀರು ತುಂಬಿರುತ್ತದೆ’ ಎಂದು ಟೆನಿಸ್ಸಿ ಜಾನ್ಸನ್ ಸಿಟಿ ಮೆಡಿಕಲ್ ಸೆಂಟರ್‌ನ ಕ್ರಿಟಿಕಲ್ ಕೇರ್ ಘಟಕದ ನಿರ್ದೇಶಕ ಅಲಿಸನ್ ಜಾನ್ಸನ್ ಅವರು ತಿಳಿಸಿದರು.
ಕಳೆದ ತಿಂಗಳು ಅಮೆರಿಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದ್ವಿಗುಣವಾಗಿತ್ತು. ಈ ವಾರ ಪ್ರತಿನಿತ್ಯ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಗುರುವಾರ ಸುಮಾರು 77,000 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರತಿನಿತ್ಯ ಸರಾಸರಿ 1,60,000 ಪ್ರಕರಣಗಳು ವರದಿಯಾಗುತ್ತಿವೆ. ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ತಿಂಗಳು ಪ್ರತಿನಿತ್ಯ ಸರಾಸರಿ 1,155 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಗರ್ವನರ್, ಮೇಯರ್‌ಗಳು ನಗರಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯನ್ನು ಕಡ್ಡಾಯಗೊಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೆಸ್ಟೋರೆಂಟ್ ಮತ್ತು ಜಿಮ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಅಲ್ಲದೆ ಬಾರ್, ಅಂಗಡಿ ಮತ್ತು ಇತರೆ ವ್ಯವಹಾರಗಳಲ್ಲಿ ಜನರ ಸಾಮರ್ಥ್ಯವನ್ನು ಮತ್ತು ಕೆಲಸದ ಅವಧಿಯನ್ನು ನಿಗದಿ ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.