ADVERTISEMENT

ಅಫ್ಗಾನಿಸ್ತಾನದಲ್ಲಿ ಸಂಘರ್ಷ: ಸುದೀರ್ಘ ಯುದ್ಧಕ್ಕೆ ಭಾರಿ ಬೆಲೆತೆತ್ತ ಅಮೆರಿಕ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:45 IST
Last Updated 31 ಆಗಸ್ಟ್ 2021, 19:45 IST
ಕಾಬೂಲ್‌ ವಿಮಾನ ನಿಲ್ದಾಣ
ಕಾಬೂಲ್‌ ವಿಮಾನ ನಿಲ್ದಾಣ   

ಅಮೆರಿಕವು ತನ್ನ ಅತ್ಯಂತ ದೀರ್ಘವಾದ ಸೇನಾ ಕಾರ್ಯಾಚರಣೆಯನ್ನು ಮಂಗಳವಾರ ಕೊನೆಗೊಳಿಸಿದೆ. 2001ರಿಂದ 2021ರ ಆಗಸ್ಟ್ 31ರವರೆಗೆ ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಹೋರಾಡಿದ ಅಮೆರಿಕದ ಸೈನಿಕರು ಈಗ ತಾಯ್ನಾಡಿಗೆ ಮರಳಿದ್ದಾರೆ. ಅಮೆರಿಕದ ಸೈನಿಕರ ಕೊನೆಯ ತಂಡ ಮಂಗಳವಾರ ಕಾಬೂಲ್‌ ತೊರೆದಿದೆ. ಆದರೆ 20 ವರ್ಷಗಳ ಸುದೀರ್ಘ ಸೇನಾ ಕಾರ್ಯಾಚರಣೆಯ ಪರಿಣಾಮವನ್ನು ಹಲವು ತಲೆಮಾರಿನ ಅಮೆರಿಕನ್ನರು ಅನುಭವಿಸಬೇಕು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಅಮೆರಿಕನ್ನರಿಗೆ ಸಾಲದ ಹೊರೆ
20 ವರ್ಷಗಳ ಸುದೀರ್ಘ ಹೋರಾಟದಲ್ಲಿ ಸೇನಾ ಕಾರ್ಯಾಚರಣೆ, ಶಸ್ತ್ರಾಸ್ತ್ರ, ಅಫ್ಗನ್ನರಿಗೆ ನೆರವು ಮುಂತಾದ ರೂಪದಲ್ಲಿ ಅಮೆರಿಕವು ಲಕ್ಷಾಂತರ ಕೋಟಿ ಡಾಲರ್ ವೆಚ್ಚ ಮಾಡಿದೆ.

ಅದರಲ್ಲಿ ಪ್ರತಿ ಡಾಲರ್ ಹಣವನ್ನೂ ಸಾಲದ ಮೂಲಕ ಒದಗಿಸಲಾಗಿದೆ. ಅಷ್ಟೂ ಸಾಲವು ಈಗ ಅಮೆರಿಕದ ಜನತೆ ಮೇಲಿದೆ. ಮುಂದಿನ ಮೂರು ತಲೆಮಾರು ಸಹ ಈ ಸಾಲದ ಹೊರೆಯನ್ನು ಹೊರಬೇಕಿದೆ. ಕೊರಿಯಾ ಯುದ್ಧ, ವಿಯೆಟ್ನಾಂ ಯುದ್ಧದ ವೆಚ್ಚವನ್ನು ಭರಿಸಲು ಅಂದಿನ ಅಮೆರಿಕ ಸರ್ಕಾರವು ವಿವಿಧ ತೆರಿಗೆಗಳನ್ನು ವಿಪರೀತ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಆದರೆ ಇರಾಕ್ ಮತ್ತು ಅಫ್ಗನ್ ಯುದ್ಧದ ವೆಚ್ಚವನ್ನು ಸಾಲದ ಮೂಲಕ ಒದಗಿಸಲಾಗಿತ್ತು.

ADVERTISEMENT

* 2 ಲಕ್ಷ ಕೋಟಿ ಡಾಲರ್ (ಸುಮಾರು ₹150 ಲಕ್ಷ ಕೋಟಿ): ಅಫ್ಗನ್ ಮತ್ತು ಇರಾಕ್ ಯುದ್ಧಕ್ಕೆ ಅಮೆರಿಕವು ವಿನಿಯೋಗಿಸಿರುವ ಮೊತ್ತ

* 6.5 ಲಕ್ಷ ಕೋಟಿ ಡಾಲರ್ (ಸುಮಾರು ₹480 ಲಕ್ಷ ಕೋಟಿ): ಈ ಸಾಲವನ್ನು ತೀರಿಸುವಷ್ಟರಲ್ಲಿ 2050ರ ವೇಳೆಗೆ ಆಗುವ ವೆಚ್ಚ

ಅಪಾರ ಜೀವ ಹಾನಿ

20 ವರ್ಷಗಳ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಸೈನಿಕರು, ನಾಗರಿಕರು, ಮಾನವ ಹಕ್ಕುಗಳ ಹೋರಾಟಗಾರರು, ಪತ್ರಕರ್ತರು, ಉಗ್ರರು... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ

* 2,462 ಅಮೆರಿಕ ಸೈನಿಕರು

* 3,846 ಅಮೆರಿಕ ಸರ್ಕಾರದ ನೌಕರರು

* 66,000 ಅಫ್ಗಾನಿಸ್ತಾನ ಸೈನಿಕರು ಮತ್ತು ಪೊಲೀಸರು

*1,144 ನ್ಯಾಟೊ ಪಡೆ ಸೈನಿಕರು

* 47,245 ಅಫ್ಗನ್ ನಾಗರಿಕರು

* 51,191 ತಾಲಿಬಾನ್ ಮತ್ತು ಇತರ ಉಗ್ರ ಸಂಘಟನೆ ಸದಸ್ಯರು

* 444 ಮಾನವ ಹಕ್ಕುಗಳ ಹೋರಾಟಗಾರರು

* 72 ಪತ್ರಕರ್ತರು

* 20 ವರ್ಷಗಳ ಬದಲಾವಣೆ

ಈ ಕಾರ್ಯಾಚರಣೆಯ ಅವಧಿಯಲ್ಲಿ ಅಫ್ಗಾನಿಸ್ತಾನದ ಸಾಮಾಜಿಕ ಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಿದೆ. ಮಹಿಳೆಯರ ಶಿಕ್ಷಣ, ವಿದ್ಯುತ್ ಸಂಪರ್ಕ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆಯಾಗಿದೆ

50 % ಅಮೆರಿಕವು ಕಾರ್ಯಾಚರಣೆ ಆರಂಭಿಸಿದ ನಂತರ ಅಫ್ಗಾನಿಸ್ತಾನದಲ್ಲಿ ಶಿಶುಮರಣದಲ್ಲಿ ಆದ ಇಳಿಕೆ ಪ್ರಮಾಣ

37 % ಈಗ ಶಿಕ್ಷಣ ಪಡೆಯುತ್ತಿರುವ ಅಫ್ಗಾನಿಸ್ತಾನದ ಬಾಲಕಿಯರು ಮತ್ತು ಯುವತಿಯರ ಪ್ರಮಾಣ

98 % ವಿದ್ಯುತ್ ಸಂಪರ್ಕ ಪಡೆದಿರುವ ಕುಟುಂಬಗಳ ಪ್ರಮಾಣ (2005ರಲ್ಲಿ ಈ ಪ್ರಮಾಣ ಶೇ 22ರಷ್ಟು ಮಾತ್ರ)

ಆಧಾರ: ಎಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.