ADVERTISEMENT

ಭಾರತದೊಂದಿಗಿನ ವ್ಯಾಪಾರ ಒಪ್ಪಂದ: ‘ದ್ವಿದಳ ಧಾನ್ಯ’ ಕೈಬಿಟ್ಟ ಅಮೆರಿಕ

ಪಿಟಿಐ
Published 11 ಫೆಬ್ರುವರಿ 2026, 15:40 IST
Last Updated 11 ಫೆಬ್ರುವರಿ 2026, 15:40 IST
   

ವಾಷಿಂಗ್ಟನ್‌: ಭಾರತ–ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (ಬಿಟಿಎ) ಸಂಬಂಧಿಸಿದಂತೆ ಟ್ರಂಪ್‌ ಆಡಳಿತವು ಮಂಗಳವಾರ, ಒಪ್ಪಂದದ ರೂಪುರೇಷೆ ನಿಬಂಧನೆಗಳನ್ನು ಒಳಗೊಂಡ ಪರಿಷ್ಕೃತ ಫ್ಯಾಕ್ಟ್‌ಶೀಟ್‌ ಪ್ರಕಟಿಸಿದೆ.

ಸುಂಕ ಕಡಿತಗೊಳಿಸಿ ಅಥವಾ ಸುಂಕ ರಹಿತವಾಗಿ ಭಾರತವು ಆಮದು ಮಾಡಿಕೊಳ್ಳಲಿದೆ ಎಂದು ಅಮೆರಿಕ ಹೇಳಿದ್ದ ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿ ‘ದ್ವಿದಳ ಧಾನ್ಯ’ವನ್ನು ಕೈಬಿಡಲಾಗಿದೆ.  

ಫೆಬ್ರುವರಿ 9ರಂದು ಶ್ವೇತಭವನ ಪ್ರಕಟಿಸಿದ್ದ ಫ್ಯಾಕ್ಟ್‌ಶೀಟ್‌ನಲ್ಲಿ, ಅಮೆರಿಕದಿಂದ ಸುಂಕ ಕಡಿತವಾಗಿ ಅಥವಾ ಸುಂಕ ರಹಿತವಾಗಿ ಭಾರತದ ಮಾರುಕಟ್ಟೆ ಪ್ರವೇಶಿಸಲಿರುವ ಕೃಷಿ ಉತ್ಪನ್ನಗಳಲ್ಲಿ ಮುಖ್ಯವಾಗಿ ‘ದ್ವಿದಳ ಧಾನ್ಯ’ವನ್ನು ಉಲ್ಲೇಖಿಸಲಾಗಿತ್ತು. 

ADVERTISEMENT

ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಲ್ಲಿ ಡಿಸ್ಟಿಲರ್ಸ್‌ ಧಾನ್ಯಗಳು (ಡಿಡಿಜಿಎಸ್‌), ಕೆಂಪು ಜೋಳ, ಡ್ರ್ರೈಫ್ರೂಟ್‌ಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣು, ಸೋಯಾಬೀನ್‌ ಎಣ್ಣೆ, ವೈನ್ ಮತ್ತು ಮದ್ಯವನ್ನು ಹಾಗೆಯೇ ಉಳಿಸಿಕೊಂಡು, ‘ದ್ವಿದಳ ಧಾನ್ಯ’ ಮತ್ತು ‘ಇತರ ಕೃಷಿ ಉತ್ಪನ್ನ’ಗಳನ್ನು ತೆಗೆದುಹಾಕಲಾಗಿದೆ. ಜತೆಗೆ, ಈ ಉತ್ಪನ್ನಗಳನ್ನು ಖರೀದಿಸಲು ಭಾರತ ‘ಬದ್ಧ’ವಾಗಿದೆ ಎಂಬ ಪದವನ್ನು ಕೈಬಿಟ್ಟು, ಖರೀದಿಸಲು ‘ಬಯಸಿದೆ’ ಎಂದು ಬದಲಿಸಲಾಗಿದೆ.   

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಧ್ಯಂತರ ಚೌಕಟ್ಟು ರೂಪುಗೊಂಡ ಬೆನ್ನಲ್ಲೇ ಫ್ಯಾಕ್ಟ್‌ ಶೀಟ್‌ ಅನ್ನು ಶ್ವೇತಭವನ ಪ್ರಕಟಿಸಿತ್ತು. ‘ಭಾರತವು ಅಮೆರಿಕದಿಂದ ಮುಂದಿನ 5 ವರ್ಷಗಳ ಅವಧಿಗೆ, ಇಂಧನ, ವಿಮಾನ ಮತ್ತು ವಿಮಾನದ ಬಿಡಿಭಾಗಗಳು, ಅಮೂಲ್ಯ ಲೋಹಗಳು, ಸಾಫ್ಟ್‌ವೇರ್‌, ಹಾರ್ಡ್‌ವೇರ್, ಡಿಜಿಟಲ್‌ ಉಪಕರಣಗಳು, ಕಲ್ಲಿದ್ದಲನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ’ ಎಂದು ಉಭಯ ದೇಶಗಳ ಜಂಟಿ ಪ್ರಕಟಣೆ ತಿಳಿಸಿತ್ತು. 

ಆದರೆ, ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಲ್ಲಿ, ಅಮೆರಿಕದಿಂದ ಇಂಧನ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ, ಕಲ್ಲಿದ್ದಲು, ಕೃಷಿ ಮತ್ತು ಇತರೆ ವಲಯಗಳ ಉತ್ಪನ್ನಗಳು ಸೇರಿ ಒಟ್ಟು 500 ಬಿಲಿಯನ್‌ ಡಾಲರ್‌ಗಿಂತ (ಸರಿಸುಮಾರು ₹45.28 ಲಕ್ಷ ಕೋಟಿ) ಹೆಚ್ಚಿನ ಮೊತ್ತದ ಸರಕುಗಳನ್ನು ಖರೀದಿಸಲು ಭಾರತ ಉದ್ದೇಶಿಸಿದೆ. ಎಲ್ಲ ಕೈಗಾರಿಕಾ ಸರಕುಗಳು, ವಿಶಾಲ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಬಹುದು ಅಥವಾ ತೆಗೆದುಹಾಕಬಹುದು ಎಂದು ಹೇಳಲಾಗಿದೆ. ಅಂತಿಮ ಒಪ್ಪಂದದಲ್ಲಿ ಅಮೆರಿಕವು ಭಾರತಕ್ಕೆ ಸುಂಕ ರಹಿತವಾಗಿ ರಫ್ತು ಮಾಡುವ ಸರಕುಗಳ ಪಟ್ಟಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

‘ಸೀಮಿತಗೊಳಿಸುತ್ತೇವೆ’
‘ಅಮೆರಿಕದ ಕೃಷಿ ಉತ್ಪನ್ನಗಳ ಭಾರತ ಮಾರುಕಟ್ಟೆ ಪ್ರವೇಶವನ್ನು ಸೀಮಿತಗೊಳಿಸುತ್ತೇವೆ. ಅದಕ್ಕಾಗಿ ಸುಂಕ ನಿರ್ಧರಿಸುವಾಗ ನಮ್ಮದೇ ಕಾರ್ಯವಿಧಾನ ಬಳಸುತ್ತೇವೆ. ಹಾಗಾಗಿ ಇದು ನಮ್ಮ ಕೃಷಿಕರ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್‌ ಅಗರ್‌ವಾಲ್‌ ಹೇಳಿದ್ದಾರೆ.   ಭಾರತ–ಅಮೆರಿಕ ನಡುವಿನ ಅಂತಿಮ ವ್ಯಾಪಾರ ಒಪ್ಪಂದಕ್ಕೆ ಮಾರ್ಚ್‌ ಅಂತ್ಯದ ವೇಳೆಗೆ ಸಹಿ ಹಾಕುವ ಸಾಧ್ಯತೆ ಇದೆ ಎಂದಿದ್ದಾರೆ. 

ನಕ್ಷೆ ಅಳಿಸಿ ಹಾಕಿದ ಯುಎಸ್‌ಟಿಆರ್‌

ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಪ್ರದೇಶ ಹಾಗೂ ಅಕ್ಸಾಯ್ ಚಿನ್ ಅನ್ನು ಭಾರತದ ಭಾಗವಾಗಿ ತೋರಿಸಿದ ನಕ್ಷೆಯನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (ಯುಎಸ್‌ಟಿಆರ್‌) ‘ಎಕ್ಸ್‌’ ಪೋಸ್ಟ್‌ನಿಂದ ತೆಗೆದುಹಾಕಿದೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಧ್ಯಂತರ ಚೌಕಟ್ಟು ರೂಪುಗೊಂಡ ಬೆನ್ನಲ್ಲೇ ಯುಎಸ್‌ಟಿಆರ್‌ ಈ ನಕ್ಷೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಒಪ್ಪಂದ ಮಾಹಿತಿ ಹಂಚಿಕೊಂಡಿತ್ತು. ಇದೀಗ ನಕ್ಷೆಯನ್ನು ಯುಎಸ್‌ಟಿಆರ್‌ನ ‘ಎಕ್ಸ್‌’ ಹ್ಯಾಂಡಲ್‌ನಿಂದ ಅಳಿಸಿ ಹಾಕಲಾಗಿದೆ.  ಈ ಹಿಂದೆಯೆಲ್ಲಾ ಪಿಒಕೆ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ಪ್ರತ್ಯೇಕವಾಗಿ ತೋರಿಸುವ ರೇಖೆಯೊಂದಿಗೆ ಭಾರತದ ನಕ್ಷೆಯನ್ನು ಪ್ರಕಟಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.