ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಅಮೆರಿಕವು ಎಲ್ಲ ವಿದೇಶಿ ನೆರವನ್ನು ಸ್ಥಗಿತಗೊಳಿಸಿದೆ. ‘ಅಮೆರಿಕ ಫಸ್ಟ್’ ಅಜೆಂಡಾದ ಅಡಿಯಲ್ಲಿ ತನ್ನ ವಿದೇಶಾಂಗ ನೀತಿಯು ದಕ್ಷ ಮತ್ತು ಸ್ಥಿರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತರ ದೇಶಗಳಿಗೆ ಅಮೆರಿಕದ ಹಣಕಾಸಿನ ನೆರವನ್ನು ಪರಿಶೀಲಿಸಲು ಆದೇಶಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿಟ್ಟಿನಲ್ಲಿ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
‘ಅಮೆರಿಕ ಜನರಿಗೆ ಯಾವುದೇ ಪ್ರತಿಫಲ ಸಿಗದ ಹೊರತು ಇನ್ನುಮುಂದೆ ಕುರುಡಾಗಿ ವಿದೇಶಗಳಿಗೆ ಹಣಕಾಸಿನ ನೆರವನ್ನು ನೀಡಲು ಹೋಗುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವ ತೆರಿಗೆದಾರರ ಪರವಾಗಿ ವಿದೇಶಿ ನೆರವನ್ನು ಪರಿಶೀಲಿಸುವುದು ಮತ್ತು ಮರುಹೊಂದಿಸುವುದು ನೈತಿಕ ಅವಶ್ಯಕತೆಯಾಗಿದೆ’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರರಾದ ಟಮ್ಮಿ ಬ್ರೂಸ್ ಹೇಳಿದ್ದಾರೆ.
ವಿದೇಶಾಂಗ ಇಲಾಖೆ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿಗೆ ಸಂಬಂಧಿಸಿದ ಅಮೆರಿಕದ ಸಂಸ್ಥೆ (ಯುಎಸ್‌ಎಐಡಿ) ಮೂಲಕ ಪಡೆದಿರುವ ಎಲ್ಲ ಧನಸಹಾಯವನ್ನು ಸ್ಥಗಿತಗೊಳಿಸಿರುವ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಅಮೆರಿಕ ಫಸ್ಟ್’ಅಜೆಂಡಾದ ಅಡಿಯಲ್ಲಿ ಅಮೆರಿಕ ವಿದೇಶಾಂಗ ನೀತಿ ಅಡಿ ನೀಡಲಾಗಿರುವ ನೆರವು ಸಮರ್ಥ ಮತ್ತು ಸ್ಥಿರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಲ್ಲ ವಿದೇಶಿ ನೆರವನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ’ ಎಂದು ಬ್ರೂಸ್ ಹೇಳಿದ್ದಾರೆ.
ವಿದೇಶಗಳಲ್ಲಿ ನಾವು ನೀಡಿದ ನೆರವನ್ನು ಹೇಗೆ ಖರ್ಚು ಮಾಡಬೇಕು ಎಂಬುದರ ಕುರಿತು ವಿವೇಚನಾಶೀಲ ವಿಮರ್ಶೆಯ ಮೂಲಕ ಅಮೆರಿಕದ ಹಣಕಾಸನ್ನು ರಕ್ಷಿಸಲು ವಿದೇಶಾಂಗ ಕಾರ್ಯದರ್ಶಿ ಬದ್ಧರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
‘ನಾವು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂಬುದು ಅಧ್ಯಕ್ಷೀಯ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿನಲ್ಲಿ ಸ್ಪಷ್ಟವಾಗಿದೆ. ಜನರು ಶ್ರಮಪಟ್ಟು ಸಂಪಾದಿಸಿದ ಹಣದ ಮೇಲ್ವಿಚಾರಕರಾಗಿ ನಮ್ಮ ಪಾತ್ರವನ್ನು ಬಹಳ ಗಂಭೀರವಾಗಿ ನಿರ್ವಹಿಸುತ್ತೇವೆ’ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.