ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ವ್ಯಾಪಾರ ಮುಂದಿಟ್ಟುಕೊಂಡು ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷವನ್ನು ನಾನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ ಎಂದು ನಾನು ಭಾವಿಸಿರುವುದಾಗಿ ಟ್ರಂಪ್, ಓವಲ್ ಕಚೇರಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಅಮೆರಿಕ ದೊಡ್ಡ ವ್ಯವಹಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
'ನೀವು ಏನು ಮಾಡುತ್ತಿದ್ದೀರಿ?’ ಎಂದು ಎರಡೂ ದೇಶಗಳನ್ನು ಪ್ರಶ್ನಿಸಿದ್ದೆ ಎಂದು ಅವರು ತಿಳಿಸಿದ್ದಾರೆ.
ನೀವು ಗುಂಡು ಹಾರಿಸುತ್ತಾ ಹೋದರೆ, ಅದಕ್ಕೆ ಮಿತಿಯೇ ಇರುವುದಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಟ್ಟದಾಗುತ್ತಾ ಹೋಗುತ್ತದೆ. ಮತ್ತಷ್ಟು ಗಂಭೀರವಾಗುತ್ತಾ ಹೋಗುತ್ತದೆ ಎಂದು ನಾವು ಅವರ ಜೊತೆ ಮಾತನಾಡಿದೆವು. ಅದಾದ, ಎರಡು ದಿನಗಳ ನಂತರ ಫಲಿತಾಂಶ ಬಂದಿತು ಎಂದು ಅವರು ಹೇಳಿದ್ದಾರೆ.
'ಪಾಕಿಸ್ತಾನದಲ್ಲಿ ಕೆಲ ಒಳ್ಳೆಯ ನಾಯಕರಿದ್ದಾರೆ. ಭಾರತದ ಪ್ರಧಾನಿ ಮೋದಿ ನನ್ನ ಸ್ನೇಹಿತ’ಎಂದು ಟ್ರಂಪ್ ಹೇಳಿದ್ದಾರೆ. ಮೋದಿ ನಮಗೂ ಸ್ನೇಹಿತ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿದೆ ಎಂದು ಅಮೆರಿಕ ಅಧ್ಯಕ್ಷರು ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7ರಿಂದ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂಧೂರ' ಅಡಿಯಲ್ಲಿ ನಿಖರವಾದ ದಾಳಿಗಳನ್ನು ನಡೆಸಿತ್ತು. ಇದರಲ್ಲಿ ನೂರಾರು ಉಗ್ರರನ್ನು ಕೊಂದಿತ್ತು.
ನಂತರ, ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಬಳಿಕ, ಭಾರತೀಯ ಪಡೆಗಳು ಪಾಕಿಸ್ತಾನದ ಹಲವು ಸೇನಾ ನೆಲೆಗಳ ಮೇಲೆ ಉಗ್ರ ಪ್ರತಿದಾಳಿ ನಡೆಸಿದ್ದವು.
ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಉಭಯ ದೇಶಗಳು ಯುದ್ಧ ವಿರಾನಕ್ಕೆ ಸಮ್ಮತಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.