ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಇಲಾನ್ ಮಸ್ಕ್ ನಡುವಿನ ‘ಸ್ನೇಹ’ ಮುರಿದುಬಿದ್ದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರೂ ಪರಸ್ಪರ ಮಾತಿನ ಪ್ರಹಾರ ನಡೆಸಿದ್ದಾರೆ.
ಇದರ ಬೆನ್ನಲ್ಲೇ ‘ಇಬ್ಬರೂ ಮಾತುಕತೆ ಮೂಲಕ ಭಿನ್ನಮತ ಶಮನಗೊಳಿಸಲಿದ್ದಾರೆ’ ಎಂದು ವರದಿಯಾಗಿದೆ. ಆದರೆ ಶ್ವೇತಭವನದ ಅಧಿಕಾರಿಯೊಬ್ಬರು ಈ ವರದಿಯನ್ನು ಅಲ್ಲಗಳೆದಿದ್ದಾರೆ.
‘ಟ್ರಂಪ್ ಮತ್ತು ಮಸ್ಕ್ ಮಾತುಕತೆ ನಡೆಸಲಿದ್ದು, ಇದು ಇಬ್ಬರ ನಡುವಿನ ವಿವಾದವನ್ನು ಬಗೆಹರಿಸಲಿದೆ’ ಎಂದು ಶ್ವೇತಭವನ ಹೇಳಿರುವುದಾಗಿ ‘ಪೊಲಿಟಿಕೊ’ ವರದಿ ಮಾಡಿದೆ. ಇದನ್ನು ಶುಕ್ರವಾರ ಅಲ್ಲಗಳೆದ ಶ್ವೇತಭವನದ ಅಧಿಕಾರಿ, ‘ಟ್ರಂಪ್ ಅವರು ಮಸ್ಕ್ ಜತೆ ಮಾತನಾಡುವ ಆಸಕ್ತಿ ಹೊಂದಿಲ್ಲ’ ಎಂದಿದ್ದಾರೆ.
ಟ್ರಂಪ್ ಅವರ ತೆರಿಗೆ ಮತ್ತು ಖರ್ಚು ಮಸೂದೆಯನ್ನು ವಿರೋಧಿಸಿ ಮಸ್ಕ್ ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡುತ್ತಲೇ ಇದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್, ‘ಮಸ್ಕ್ ಅವರ ವರ್ತನೆಯಿಂದಾಗಿ ನಿರಾಶೆಗೊಂಡಿದ್ದೇನೆ’ ಎಂದಿದ್ದರು. ಆ ಬಳಿಕ ಇಬ್ಬರೂ ಪರಸ್ಪರ ಅರೋಪ–ಪ್ರತ್ಯಾರೋಪ ನಡೆಸಿದ್ದಾರೆ.
ಚುನಾವಣೆ ವೇಳೆ ರಿಪಬ್ಲಿಕನ್ ಪಕ್ಷಕ್ಕೆ 30 ಕೋಟಿ ಡಾಲರ್ (ಅಂದಾಜು ₹ 2,570 ಕೋಟಿ) ದೇಣಿಗೆ ನೀಡಿದ್ದ ಮಸ್ಕ್, ‘ನನ್ನ ಬೆಂಬಲವಿಲ್ಲದೆ ಟ್ರಂಪ್ ಅವರು 2024ರ ಚುನಾವಣೆಯಲ್ಲಿ ಗೆಲ್ಲುತ್ತಿರಲಿಲ್ಲ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಟ್ರಂಪ್ ಅವರ ತೆರಿಗೆ ನೀತಿಯಿಂದ ಅಮೆರಿಕವು ಆರ್ಥಿಕ ಹಿಂಜರಿತದ ಅಪಾಯಕ್ಕೆ ಸಿಲುಕಿದೆ ಎಂದಿದ್ದರಲ್ಲದೆ, ಅಮೆರಿಕದ ಅಧ್ಯಕ್ಷರನ್ನು ವಾಗ್ದಂಡನೆಗೆ ಗುರಿಪಡಿಸುವ ಸಲಹೆಯನ್ನೂ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಟ್ರಂಪ್, ಸ್ಟಾರ್‌ಲಿಂಕ್ ಉಪಗ್ರಹ ಸೇವೆಯ ಬಳಕೆ ಸೇರಿದಂತೆ ಮಸ್ಕ್ ಅವರ ಕಂಪನಿಗಳು ಸರ್ಕಾರದ ಜತೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಗೊಳಿಸುವ ಬೆದರಿಕೆ ಹಾಕಿದ್ದರು.
‘ನಮ್ಮ ಬಜೆಟ್‌ನಲ್ಲಿ ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ, ಮಸ್ಕ್ ಅವರಿಗೆ ನೀಡುತ್ತಿರುವ ಸಬ್ಸಿಡಿಗಳು ಮತ್ತು ಒಪ್ಪಂದಗಳನ್ನು ರದ್ದುಗೊಳಿಸುವುದಾಗಿದೆ’ ಎಂದು ಟ್ರುತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮಸ್ಕ್, ನಾಸಾ ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲು ಬಳಸುವ ಸ್ಪೇಸ್‌ಎಕ್ಸ್ ಕಂಪನಿಯ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶದ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದರು. ಆದರೆ, ಶುಕ್ರವಾರ ಅವರು ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ.
ಇಬ್ಬರ ನಡುವಿನ ಜಟಾಪಟಿಯ ಬೆನ್ನಲ್ಲೇ ಮಸ್ಕ್ ಅವರ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಗುರುವಾರ ಶೇಕಡ 14ರಷ್ಟು ಕುಸಿತ ಕಂಡಿತ್ತು.
ಮಸ್ಕ್ ಅವರು ಅಮೆರಿಕದ ಅಧ್ಯಕ್ಷರ ಉನ್ನತ ಸಲಹೆಗಾರ ಸ್ಥಾನವನ್ನು ಈಚೆಗೆ ತೊರೆದಿದ್ದರು. ಅಮೆರಿಕ ಸರ್ಕಾರದ ದಕ್ಷತಾ ಇಲಾಖೆಯ (ಡಿಒಜಿಇ) ನೇತೃತ್ವ ವಹಿಸಿದ್ದ ಅವರು ಫೆಡರಲ್ ಅಧಿಕಾರಶಾಹಿಯ ಖರ್ಚು, ವೆಚ್ಚಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.