ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು
ರಾಯಿಟರ್ಸ್ ಚಿತ್ರ
ಪಾಮ್ ಬೀಚ್ ಗಾರ್ಡನ್ಸ್ (ಫ್ಲಾರಿಡಾ): ಅಧಿಕಾರಕ್ಕೆ ಮರಳಿದ ನಂತರ ಶ್ವೇತಭವನದ ತಮ್ಮ 2ನೇ ಸಭೆಯಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಹಮಾಸ್ ಉಗ್ರಗಾಮಿ ಗುಂಪಿನ ಮೇಲೆ ಒತ್ತಡ ಹೇರಲು ಗಾಜಾದಾದ್ಯಂತ ಹೊಸ ಭದ್ರತಾ ಕಾರಿಡಾರ್‌ನಲ್ಲಿ ಇಸ್ರೇಲ್ ಸೇನೆಯನ್ನು ನಿಯೋಜಿಸುತ್ತಿದ್ದು, ಇದರ ಬೆನ್ನಲ್ಲೇ ಈ ಭೇಟಿ ನಡೆಯುತ್ತಿದೆ.
ಗಾಜಾದ ಬೃಹತ್ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಳ್ಳುತ್ತದೆ ಮತ್ತು ಅವುಗಳನ್ನು ಭದ್ರತಾ ವಲಯಗಳು ಎಂದು ಕರೆಯಲ್ಪಡುವ ಪ್ರದೇಶಗಳಿಗೆ ಸೇರಿಸಲಾಗುತ್ತದೆ ಎಂದು ರಕ್ಷಣಾ ಸಚಿವ ಹೇಳಿದ್ದಾರೆ.
ಕಳೆದ ತಿಂಗಳು, ಕದನ ವಿರಾಮಕ್ಕಾಗಿ ಪ್ರಸ್ತಾವಿತ ಹೊಸ ನಿಯಮಗಳನ್ನು ಒಪ್ಪಿಕೊಳ್ಳಲು ಹಮಾಸ್ ಮೇಲೆ ಒತ್ತಡದ ಭಾಗವಾಗಿ ಇಸ್ರೇಲ್, ಗಾಜಾದಲ್ಲಿ ಅನಿರೀಕ್ಷಿತ ಬಾಂಬ್ ದಾಳಿ ನಡೆಸಿ ಕದನ ವಿರಾಮವನ್ನು ಮುರಿದಿತ್ತು. ಈ ದಾಳಿಯಲ್ಲಿ ನೂರಾರು ಮಂದಿ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದರು.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಹಮಾಸ್ ಉಗ್ರರು ಬಂಧಿಸಿ ಕರೆದೊಯ್ದಿರುವ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಗಾಜಾದಲ್ಲಿ ಯುದ್ಧವನ್ನು ಹೆಚ್ಚಿಸುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ.
ಇಸ್ರೇಲ್‌ನ ಹೊಸ ದಾಳಿಯು ಮತ್ತೆ ಯುದ್ಧಕ್ಕೆ ನಾಂದಿ ಹಾಡಿದೆ. ಗಾಜಾಗೆ ಆಹಾರ, ಇಂಧನ ಮತ್ತು ಮಾನವೀಯ ನೆರವು ಸೇರಿದಂತೆ ಎಲ್ಲ ಸರಬರಾಜನ್ನೂ ಸ್ಥಗಿತಗೊಳಿಸಿದೆ.
ನೆತನ್ಯಾಹು ಮತ್ತು ಟ್ರಂಪ್ ಸುಂಕದ ವಿಷಯ, ನಮ್ಮ ಒತ್ತೆಯಾಳುಗಳನ್ನುಬಿಡುಗಡೆ ಮಾಡುವ ಪ್ರಯತ್ನಗಳು, ಇಸ್ರೇಲ್-ಟರ್ಕಿ ಸಂಬಂಧಗಳು, ಇರಾನಿನ ಬೆದರಿಕೆ ಮತ್ತು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ವಿರುದ್ಧದ ಹೋರಾಟದ ಕುರಿತು ಚರ್ಚಿಸಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ನೆತನ್ಯಾಹು ಅವರ ಕಚೇರಿಯು ಹೇಳಿಕೆ ಪ್ರಕಟಿಸಿದೆ.
ಅಮೆರಿಕದಿಂದ ಇಸ್ರೇಲ್ ಶೇ 17ರಷ್ಟು ಆಮದು ಸುಂಕವನ್ನು ಎದುರಿಸುತ್ತಿದೆ.
ಗಾಜಾದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ನೆತನ್ಯಾಹು ಅಂತರರಾಷ್ಟ್ರೀಯ ನ್ಯಾಯಾಲಯದ ವಾಂಟೆಡ್ ಪಟ್ಟಿಯಲ್ಲಿದ್ದಾರೆ. ಅಮೆರಿಕ ಈ ನ್ಯಾಯಾಲಯದ ಸದಸ್ಯ ರಾಷ್ಟ್ರವಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.