ADVERTISEMENT

ಖಾಲಿ ಮಾತು ಯುದ್ಧ ನಿಲ್ಲಿಸುವುದಿಲ್ಲ: ಡೊನಾಲ್ಡ್ ಟ್ರಂಪ್

ವಿಶ್ವಸಂಸ್ಥೆಯನ್ನು ಟೀಕಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಪಿಟಿಐ
Published 23 ಸೆಪ್ಟೆಂಬರ್ 2025, 16:15 IST
Last Updated 23 ಸೆಪ್ಟೆಂಬರ್ 2025, 16:15 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಿಶ್ವಸಂಸ್ಥೆ: ‘ವಿಶ್ವಸಂಸ್ಥೆಯು ಅಗಾಧವಾದ ಸಾಮರ್ಥ್ಯ ತೋರಿಸಬಹುದಾದ ಸಂಸ್ಥೆ. ಆದರೆ, ಆ  ಬರುತ್ತಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯನ್ನು ಟೀಕಿಸಿದ್ದಾರೆ.

ನ್ಯೂಯಾರ್ಕ್‌ ನಗರದಲ್ಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 150ಕ್ಕೂ ಹೆಚ್ಚು ವಿಶ್ವ ನಾಯಕರು ಹಾಗೂ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳ ಮುಂದೆಯೇ ಮಂಗಳವಾರ ಮಾತನಾಡಿದ ಅವರು, ‘ವಿಶ್ವಸಂಸ್ಥೆಯು ಪ್ರಬುದ್ಧವಾದ ಪದಗಳಲ್ಲಿ ಪತ್ರ ಬರೆಯುತ್ತದೆ. ಆದರೆ, ಅದನ್ನು ಪಾಲಿಸುವುದಿಲ್ಲ. ಖಾಲಿ ಮಾತುಗಳು ಯುದ್ಧಗಳನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದಾರೆ.

‘ವಿಶ್ವದಾದ್ಯಂತ ಅತ್ಯಂತ ಜನಾಕರ್ಷಕ ದೇಶ ಅಮೆರಿಕ. ಜಗತ್ತಿನ ಯಾವ ದೇಶವೂ ಈ ವಿಷಯದಲ್ಲಿ ನಮಗೆ ಸಾಟಿ ಇಲ್ಲ’ ಎಂದರು.

ADVERTISEMENT

‘ಅಮೆರಿಕವು ಭೂಮಿಯ ಮೇಲೆ ವ್ಯಾಪಾರ ಮಾಡಲು ಅತ್ಯುತ್ತಮ ದೇಶ. ಈಗ ಆರ್ಥಿಕತೆಯು ನನ್ನ ಮೊದಲ ಅವಧಿಗಿಂತ ದೊಡ್ಡದಾಗಿದೆ ಮತ್ತು ಇನ್ನೂ ಉತ್ತಮವಾಗಿದೆ. ವಿಶ್ವದ ಇತಿಹಾಸದಲ್ಲೇ ಶ್ರೇಷ್ಠವಾದದ್ದು. ಅಮೆರಿಕವನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮತ್ತೆ ಗೌರವಿಸಲಾಗಿದೆ’ ಎಂದು ಬಣ್ಣಿಸಿದರು.

ಯಾವುದೇ ರಾಷ್ಟ್ರವು ಈ ರೀತಿ ಬಣ್ಣಿಸಿಕೊಳ್ಳುವುದನ್ನು ವಿಶ್ವಸಂಸ್ಥೆಯು ಒಪ್ಪುವುದಿಲ್ಲ. ಇತ್ತೀಚೆಗೆ ಇಂಗ್ಲೆಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಟ್ರಂಪ್ ಇದೇ ರೀತಿ ಬಣ್ಣಿಸಿಕೊಂಡಿದ್ದರು.

‘ಯುದ್ಧ ನಿಲ್ಲಿಸಿದ್ದು ನಾನೇ’: ‘ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ’ ಎಂದು ಟ್ರಂಪ್‌ ಅವರು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.