ದುಬೈ: ಕತಾರ್ ದೇಶದ ರಕ್ಷಣೆಗಾಗಿ ಮಿಲಿಟರಿ ಬಳಕೆಯೂ ಸೇರಿದಂತೆ ಅಮೆರಿಕವು ಎಲ್ಲಾ ಕ್ರಮಗಳನ್ನು ಬಳಸಿಕೊಳ್ಳಲು ಸಿದ್ಧವಾಗಿದೆ ಎಂಬ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಕತಾರ್ ಮೇಲೆ ಇಸ್ರೇಲ್ ಅನಿರೀಕ್ಷಿತ ದಾಳಿ ನಡೆಸಿದ ಬೆನ್ನಲ್ಲೇ ಕತಾರ್‌ನ ರಕ್ಷಣೆಗೆ ಅಮೆರಿಕ ಈ ರೀತಿ ಟೊಂಕಕಟ್ಟಿ ನಿಂತಿರುವುದು ಮಹತ್ವ ಪಡೆದಿದೆ.
ಕಾರ್ಯಕಾರಿ ಆದೇಶದ ಪ್ರತಿಯು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಲಭ್ಯವಾಗಿದೆ. ಅದರಲ್ಲಿ, ‘ಕತಾರ್ ಮತ್ತು ಅಮೆರಿಕದ ನಡುವಿನ ಪರಸ್ಪರ ಸಹಕಾರ ಮತ್ತು ಹಿತಾಸಕ್ತಿಯ ಆಧಾರದಲ್ಲಿ ಕತಾರ್‌ಗೆ ಬಾಹ್ಯ ದಾಳಿಯಿಂದ ರಕ್ಷಣೆ ಒದಗಿಸಲು ಅಮೆರಿಕ ಬದ್ಧವಾಗಿದೆ’ ಎಂದು ಉಲ್ಲೇಖಿಸಲಾಗಿದೆ.
ಜತೆಗೆ ‘ಕತಾರ್‌ನ ಸಾರ್ವಭೌಮತ್ವ, ಮೂಲಸೌಕರ್ಯ ಹಾಗೂ ಕತಾರ್‌ನ ಪ್ರದೇಶಗಳ ಮೇಲೆ ನಡೆಯುವ ಯಾವುದೇ ಶಸ್ತ್ರಾಸ್ತ್ರ ದಾಳಿಯನ್ನು ಅಮೆರಿಕದ ಶಾಂತಿ ಮತ್ತು ಭದ್ರತೆಗೆ ಎದುರಾದ ಬೆದರಿಕೆ ಎಂದೇ ಪರಿಗಣಿಸಲಾಗುವುದು. ಇಂಥ ಸಂದರ್ಭದಲ್ಲಿ ಕತಾರ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲು ಅಮೆರಿಕ ಎಲ್ಲಾ ಅಗತ್ಯ ರೀತಿಯ ಕಾನೂನುಬದ್ಧ ಕ್ರಮಗಳನ್ನು ಕೈಗೆತ್ತಿಕೊಳ್ಳಲಿದೆ. ಕತಾರ್ ರಕ್ಷಣೆಗಾಗಿ ರಾಜತಾಂತ್ರಿಕ, ಆರ್ಥಿಕ ಕ್ರಮಗಳ ಜತೆಗೆ ಅಗತ್ಯಬಿದ್ದರೆ ಮಿಲಿಟರಿ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಈ ರೀತಿಯ ಕಾನೂನುಬದ್ಧ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಅಮೆರಿಕದ ಸೆನೆಟ್‌ನ ಒಪ್ಪಿಗೆಯೂ ಬೇಕಿದೆ. ಆದರೆ, ಸೆನೆಟ್‌ನ ಒಪ್ಪಿಗೆ ಪಡೆಯದೆಯೇ ಒಪ್ಪಂದಗಳಿಗೆ ಅಧ್ಯಕ್ಷರು ಸಹಿ ಮಾಡಿರುವ ನಿದರ್ಶನವೂ ಇದೆ. ಅಂತಿಮವಾಗಿ ಮಿಲಿಟರಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವುದು ಅಧ್ಯಕ್ಷರ ಕೈಯಲ್ಲಿರುವ ಕಾರಣ, ಟ್ರಂಪ್ ಅವರ ಈ ಆದೇಶ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.