ADVERTISEMENT

ಮೋದಿ ಜತೆಗಿನ ಟ್ರಂಪ್ ವೈಯಕ್ತಿಕ ಬಾಂಧವ್ಯ ಹಳಸಿದೆ..ಇದು ಇತರರಿಗೂ ಪಾಠ: ಬೋಲ್ಟನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಸೆಪ್ಟೆಂಬರ್ 2025, 7:40 IST
Last Updated 5 ಸೆಪ್ಟೆಂಬರ್ 2025, 7:40 IST
   

ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ವೈಯಕ್ತಿಕ ಬಾಂಧವ್ಯ ಹೊಂದಿದ್ದರು. ಆದರೆ ಆ ಬಾಂಧವ್ಯ ಈಗ ಇಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ.

ಬ್ರಿಟಿಷ್ ಮಾಧ್ಯಮ ಪೋರ್ಟಲ್ ಎಲ್‌ಬಿಸಿಗೆ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, 'ಅಮೆರಿಕ ಅಧ್ಯಕ್ಷರ ಜೊತೆಗಿನ ನಿಕಟ ಸಂಬಂಧದಿಂದ ಮಾತ್ರ ವಿಷಮ ಪರಿಸ್ಥಿತಿಯಿಂದ ವಿಶ್ವನಾಯಕರು ಪಾರಾಗರು. ಅಂತರರಾಷ್ಟ್ರೀಯ ಸಂಬಂಧವನ್ನು ಟ್ರಂಪ್ ಅವರು ತೀರಾ ವೈಯಕ್ತಿಕವಾಗಿ ಪರಿಗಣಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ. ಪುಟಿನ್ ಅವರೊಂದಿಗೆ ಟ್ರಂಪ್ ಉತ್ತಮ ಸಂಬಂಧ ಹೊಂದಿದ್ದರೆ, ರಷ್ಯಾ ಕೂಡ ಅಮೆರಿಕದೊಂದಿಗೆ ಉತ್ತಮ ರೀತಿಯಲ್ಲಿರುತ್ತಿತ್ತು’ ಎಂದು ಹೇಳಿದ್ದಾರೆ.

ಟ್ರಂಪ್ ಅವರು ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಈಗ ಆ ಸಂಬಂಧ ಹಳಸಿದೆ. ಇದು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಎಲ್ಲರಿಗೂ ಒಂದು ಪಾಠ. ವೈಯಕ್ತಿಕ ಸಂಬಂಧಗಳು ಕೆಲವೊಮ್ಮೆ ಸಹಾಯ ಮಾಡಬಹುದು, ಆದರೆ ಅದು ನಿಮ್ಮನ್ನು ಕೆಟ್ಟ ಪರಿಸ್ಥಿಯಿಂದ ರಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಇದೇ ವೇಳೆ ಸುಂಕ ನೀತಿಗಳು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೂ ಪರಿಣಾಮ ಬೀರಿವೆ ಎಂದು ಪ್ರತಿಪಾದಿಸಿರುವ ಬೋಲ್ಟನ್‌, ಶ್ವೇತಭವನವು ಅಮೆರಿಕ-ಭಾರತ ಸಂಬಂಧಗಳನ್ನು ದಶಕಗಳಷ್ಟು ಹಿಂದಕ್ಕೆ ತಳ್ಳಿದೆ ಎಂದಿದ್ದಾರೆ.

ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್‌ ಅವರಿಗೆ ಹತ್ತಿರವಾಗಲು, ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವಕಾಶ ಮಾಡಿಕೊಟ್ಟಿದ್ದಾರೆ ಎಂದೂ ಟೀಕಿಸಿದ್ದಾರೆ.

ಟ್ರಂಪ್ ಆಡಳಿತದಲ್ಲಿ (ಮೊದಲ ಅವಧಿ) ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಬೋಲ್ಟನ್ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.