ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಮೂಲದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರ ಕೆಲಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.
ಇದೇವೇಳೆ, ಭಾರತೀಯ-ಅಮೆರಿಕನ್ ಸಿಇಒಗಳು, ಅವರ(ಟ್ರಂಪ್) ನಾಯಕತ್ವಕ್ಕಾಗಿ ಧನ್ಯವಾದ ಅರ್ಪಿಸಿದರು. ತಂತ್ರಜ್ಞಾನ ಮತ್ತು ಎಐ ವಲಯಗಳಿಗೆ ಟ್ರಂಪ್ ಅವರ ನೀತಿಗಳನ್ನು ಪ್ರಶಂಸಿದರು.
ಗುರುವಾರ ಶ್ವೇತಭವನದಲ್ಲಿ ತಂತ್ರಜ್ಞಾನ ದೈತ್ಯ ಸಂಸ್ಥೆಗಳ ಸಿಇಒಗಳಿಗಾಗಿ ಟ್ರಂಪ್ ಔತಣಕೂಟವನ್ನು ಆಯೋಜಿಸಿದ್ದರು. ಈ ‘ಹೈ ಐಕ್ಯೂ ಗುಂಪು’ ಉದ್ಯಮದಲ್ಲಿ ಕ್ರಾಂತಿ ಮಾಡುತ್ತಿದೆ ಎಂದೂ ಹೊಗಳಿದರು.
‘ಈ ಮೇಜಿನ ಸುತ್ತಲೂ ಅತ್ಯಂತ ಪ್ರತಿಭಾನ್ವಿತ ಜನರು ಕುಳಿತಿದ್ದಾರೆ. ಇದು ಖಂಡಿತವಾಗಿಯೂ ಹೈ ಐಕ್ಯೂ ಗುಂಪು ಮತ್ತು ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ’ ಎಂದು ಟ್ರಂಪ್ ಹೇಳಿದರು
ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಮೈಕ್ರೊಸಾಫ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮುಂತಾದವರು ಭೋಜನಕೂಟದಲ್ಲಿ ಉಪಸ್ಥಿತರಿದ್ದರು.
ಪಿಚೈ ಮತ್ತು ಆ್ಯಪಲ್ ಸಿಇಒ ಟಿಮ್ ಕುಕ್ ಟ್ರಂಪ್ ಅವರ ಮೇಜಿನ ಎದುರೇ ಕುಳಿತಿದ್ದರೆ, ನಾದೆಲ್ಲ ಮೇಜಿನ ಒಂದು ತುದಿಯಲ್ಲಿ ಕುಳಿತಿದ್ದರು.
‘ಈ ಜನರ ಗುಂಪಿನಲ್ಲಿ ಇರುವುದು ಒಂದು ಗೌರವ. ಇವರೆಲ್ಲ ಉದ್ಯಮದಲ್ಲಿ ಕ್ರಾಂತಿ ಮಾಡುತ್ತಿದ್ದಾರೆ’ ಎಂದು ಟ್ರಂಪ್ ಹೇಳಿದರು. ಬಳಿಕ, ತಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಸಿಇಒಗಳಿಗೆ ಅವಕಾಶ ನೀಡಿದರು.
ಈ ವೇಳೆ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, AI ನಮ್ಮ ಜೀವಿತಾವಧಿಯಲ್ಲಿ ಅತ್ಯಂತ ಪರಿವರ್ತನಾಶೀಲ ಪ್ರಗತಿಯಾಗಿದೆ. ಈ ಪ್ರಗತಿಯಲ್ಲಿ ಅಮೆರಿಕ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಟ್ರಂಪ್ ಆಡಳಿತವು ಕೃತಕ ಬುದ್ಧಿಮತ್ತೆ (ಎಐ) ವಲಯದಲ್ಲಿ ಬಹಳಷ್ಟು ಹೂಡಿಕೆ ಮಾಡುತ್ತಿದೆ. ಜುಲೈನಲ್ಲಿ ಶ್ವೇತಭವನವು ಅನಾವರಣಗೊಳಿಸಿದ 'ಎಐ ಕ್ರಿಯಾ ಯೋಜನೆ'ಯು ಉತ್ತಮ ಆರಂಭ ಎಂದು ಹೇಳಿದರು.
‘ನಾವು ಸರ್ಕಾರದೊಂದಿಗೆ ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ನಿಮ್ಮ ನಾಯಕತ್ವಕ್ಕೆ ಧನ್ಯವಾದಗಳು’ ಎಂದು ಪಿಚೈ, ಟ್ರಂಪ್ ಅವರನ್ನು ಹೊಗಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ‘ನೀವು ಮಾಡುತ್ತಿರುವ ಕೆಲಸ ಅದ್ಭುತವಾಗಿದೆ. ನಿಜಕ್ಕೂ ಅದ್ಭುತ’ಎಂದು ಪ್ರಶಂಸಿಸಿದರು.
ಸತ್ಯ ನಾದೆಲ್ಲ ಅವರನ್ನು ಉದ್ದೇಶಿಸಿ, ಮೈಕ್ರೊಸಾಫ್ಟ್ ಸಿಇಒ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದಾಗ 28 ಡಾಲರ್‌ನಷ್ಟಿದ್ದ ಮೈಕ್ರೊಸಾಫ್ಟ್ ಷೇರು ಬೆಲೆ ಈಗ 500 ಡಾಲರ್ ಆಗಿದೆ. ಎಂತಹ ಅದ್ಭುತ ಸಾಧನೆ ಮಾಡಿದ್ದೀರಿ ಎಂದು ಟ್ರಂಪ್ ಕೊಂಡಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.