ವಾಷಿಂಗ್ಟನ್: ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ಪ್ರಮುಖ ನಾಯಕ ಜ್ಯೂ.ಮಾರ್ಟಿನ್ ಲೂಥರ್‌ಕಿಂಗ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅವರ ಕುಟುಂಬದ ಸದಸ್ಯರು, ನಾಗರಿಕ ಹಕ್ಕುಗಳ ಸಂಘಟನೆಯ ವಿರೋಧದ ನಡುವೆಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಬಿಡುಗಡೆಗೊಳಿಸಿದ್ದಾರೆ.
2.40 ಲಕ್ಷ ಪುಟಗಳನ್ನು ಒಳಗೊಂಡ ದಾಖಲೆಗಳನ್ನು ನ್ಯಾಯಾಲಯದ ಆದೇಶದಂತೆ 1977ರಿಂದಲೂ ಸಂಗ್ರಹಿಸಿ ಮುಚ್ಚಿ ಇಡಲಾಗಿತ್ತು. ಬಳಿಕ ಅವುಗಳನ್ನು ರಾಷ್ಟ್ರೀಯ ದಾಖಲೆಗಳ ನಿರ್ವಹಣಾ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
1968ರ ಏಪ್ರಿಲ್ 18ರಂದು ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) ಅವರನ್ನು ಟೆನ್ನೆಸ್ಸಿಯಲ್ಲಿರುವ ಮೆಂಫಿಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ತಂದೆಯ ಹತ್ಯೆಯ ಕುರಿತು ‘ದಶಕದಿಂದಲೂ ಸಾರ್ವಜನಿಕರ ಕುತೂಹಲ ಕೆರಳಿಸಿತ್ತು. ಈ ಎಲ್ಲ ದಾಖಲೆಗಳನ್ನು ಐತಿಹಾಸಿಕ ಸೃಷ್ಟಿಯಿಂದಲೇ ನೋಡಬೇಕು’ ಎಂದು ಮಾರ್ಟಿನ್ ಅವರ ಇಬ್ಬರು ಮಕ್ಕಳಾದ ಮಾರ್ಟಿನ್–3 (67) ಹಾಗೂ ಬೆರ್ನೈಸ್ (62) ಅವರು ಬಿಡುಗಡೆಗೊಳಿಸಿದ ದೀರ್ಘವಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಟಿನ್‌ಗೆ ಸಂಬಂಧಿಸಿದ ದಾಖಲೆಗಳು ಮುಂಚಿತವಾಗಿ ಅವರ ಕುಟುಂಬಕ್ಕೆ ಲಭ್ಯವಾಗಿತ್ತು, ಅದನ್ನು ಅವರ ತಂಡವು ವಿಸ್ತೃತವಾಗಿ ಪರಿಶೀಲಿಸಿತು. ಇದಾದ ಬಳಿಕವೇ, ಸಾರ್ವಜನಿಕರ ಬಳಕೆಗೆ ಬಿಡುಗಡೆಗೊಳಿಸಲಾಯಿತು. ಆದರೆ, ಸೋಮವಾರ ಬಿಡುಗಡೆಯಾದ ದಾಖಲೆಗಳ ಪ್ರಕಾರ, ಮಾರ್ಟಿನ್ ಅವರ ಜೀವನ, ನಾಗರಿಕ ಹಕ್ಕುಗಳ ಅವರ ಹೋರಾಟ, ಹತ್ಯೆಗೆ ಸಂಬಂಧಿಸಿದಂತೆ ಹೊಸ ಬೆಳಕು ಚೆಲ್ಲುವ ಅಂಶಗಳು ಪ್ರಕಟಗೊಂಡಿವೆಯೇ ಎಂಬುದು ಖಚಿತಪಟ್ಟಿಲ್ಲ.
‘ಮಾರ್ಟಿನ್ ಲೂಥರ್ ಕಿಂಗ್, ಕೊರೆಟ್ಟಾ ಸ್ಕಾಟ್ ಕಿಂಗ್ ಮಕ್ಕಳಾಗಿ ಅವರ ದುರಂತ ಸಾವಿನಿಂದ ವೈಯಕ್ತಿಕವಾಗಿ ನೋವು, ನಷ್ಟ ಉಂಟಾಗಿದೆ. ಅವರ ಅನುಪಸ್ಥಿತಿಯಲ್ಲಿ 57 ವರ್ಷ ನಾವು ನಮ್ಮ ಜೀವನವನ್ನು ನಡೆಸಿಕೊಂಡು ಬಂದಿದ್ದೇವೆ. ಈ ದಾಖಲೆಗಳ ಬಿಡುಗಡೆಯಲ್ಲಿ ತೊಡಗಿದವರು ಕುಟುಂಬದ ಮೇಲೂ ಸಹಾನೂಭೂತಿ, ಸಂಯಮ ಹಾಗೂ ಗೌರವ ಹೊಂದಬೇಕೆಂದು ಬಯಸುತ್ತೇವೆ’ ಎಂದು ಇಬ್ಬರು ಮಕ್ಕಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾರ್ಟಿನ್ ಅವರ ಹತ್ಯೆಯಲ್ಲಿ ಜೇಮ್ಸ್ ಅರ್ಲ್ ರೇ ಒಬ್ಬರೇ ಜವಾಬ್ದಾರರಲ್ಲ ಎಂದು ಕುಟುಂಬವು ಹಿಂದಿನಿಂದಲೂ ವಾದಿಸಿಕೊಂಡು ಬಂದಿದ್ದ ಹೇಳಿಕೆಯನ್ನು ಮಕ್ಕಳು ಕೂಡ ಪುನಾರಾವರ್ತಿಸಿದ್ದಾರೆ.
‘ದಾಖಲೆಗಳನ್ನು ಬಿಡುಗಡೆಗೊಳಿಸಿರುವುದು ಅಭೂತಪೂರ್ವ ಕ್ರಮ. ಹಲವು ದಾಖಲೆ ಡಿಜಿಟಲೀಕರಣ ಮಾಡಿರುವ ಕಾರಣ, ಸಾರ್ವಜನಿಕರ ಮುಂದಿಡಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಮೆಚ್ಚುವಂತದ್ದು’ ಎಂದು ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರ ಕಚೇರಿಯು ಪ್ರಕಟಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.