ಇಸ್ತಾಂಬುಲ್/ವಾಷಿಂಗ್ಟನ್/ಜೆರುಸಲೇಮ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದು ಹೇಳುತ್ತಿದ್ದ ಅಮೆರಿಕ, ಶನಿವಾರ ತಡರಾತ್ರಿ ಇರಾನ್‌ನ ಮೂರು ಪ್ರಮುಖ ಪರಮಾಣು ಘಟಕಗಳ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದೆ.
‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ, ಇರಾನ್ ವಿರುದ್ಧ ಇಸ್ರೇಲ್ ಸಾರಿರುವ ಯುದ್ಧವನ್ನು ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ.
‘ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಇಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ಯಶಸ್ವಿಯಾಗಿದೆ’ ಎಂದು ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪ್ರಮುಖ ಪರಮಾಣು ಘಟಕಗಳ ಮೇಲೆ ಭಾರಿ ಪ್ರಮಾಣದ ಬಾಂಬ್ ಹಾಕಲಾಗಿದ್ದು, ಎಲ್ಲ ಯುದ್ಧವಿಮಾನಗಳು ಸುರಕ್ಷಿತವಾಗಿ ಮರಳಿವೆ’ ಎಂದು ಹೇಳಿದ್ದಾರೆ.
ಅಮೆರಿಕದ ಈ ನಡೆ ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಇರಾನ್ ಪ್ರತಿಕ್ರಿಯಿಸಿದೆ. ತನ್ನ ಜನರ ಹಾಗೂ ಸಾರ್ವಭೌಮತೆ ರಕ್ಷಣೆಗಾಗಿ ಎಲ್ಲ ಆಯ್ಕೆಗಳನ್ನು ಇರಾನ್ ಮುಕ್ತವಾಗಿರಿಸಿಕೊಂಡಿದ್ದು, ತಕ್ಕ ಉತ್ತರ ನೀಡುವುದಾಗಿ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಗುಡುಗಿದ್ದಾರೆ.
ಇನ್ನೊಂದೆಡೆ, ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ, ತನ್ನ ವಾಯುಪ್ರದೇಶವನ್ನು ಮುಚ್ಚಿರುವುದಾಗಿ ಇಸ್ರೇಲ್ ಘೋಷಿಸಿದೆ.
‘ನಾಶ ಮಾಡಿದ್ದೇವೆ’:
ಇರಾನ್ ಮೇಲೆ ಭೀಕರ ದಾಳಿ ನಡೆಸಿದ ಕೆಲ ಹೊತ್ತಿನ ನಂತರ, ಟೆಲಿವಿಷನ್ ಮೂಲಕ ಮಾತನಾಡಿದ ಡೊನಾಲ್ಡ್ ಟ್ರಂಪ್,‘ರಾತ್ರೋರಾತ್ರಿ ನಡೆದ ದಾಳಿಗಳಲ್ಲಿ, ಇರಾನ್ ಪ್ರಮುಖ ಪರಮಾಣು ಘಟಕಗಳನ್ನು ನಾಶ ಮಾಡಿದ್ದೇವೆ. ಇದು ಸೇನೆಗೆ ಸಂದ ಅದ್ಭುತ ಯಶಸ್ಸು’ ಎಂದು ಹೇಳಿದರು.
‘ಶಾಂತಿ ಒಪ್ಪಂದಕ್ಕೆ ಒಪ್ಪದೇ ಇದ್ದಲ್ಲಿ, ಇರಾನ್ ಮತ್ತಷ್ಟು ಭೀಕರ ದಾಳಿಗಳನ್ನು ಎದುರಿಸಬೇಕಾಗುತ್ತದೆ. ಇದು ಅಮೆರಿಕ, ಇಸ್ರೇಲ್ ಹಾಗೂ ಇಡೀ ವಿಶ್ವಕ್ಕೇ ಐತಿಹಾಸಿಕ ಕ್ಷಣ. ಯುದ್ಧಕ್ಕೆ ಅಂತ್ಯಹಾಡಲು ಇರಾನ್ ಒಪ್ಪಿಕೊಳ್ಳಬೇಕು’ ಎಂದೂ ಹೇಳಿದರು.
‘ಭೂಮಿಯೊಳಗೆ ಬಹು ಆಳದಲ್ಲಿ ಫೋರ್ಡೊ ಪರಮಾಣು ಘಟಕ ನಿರ್ಮಿಸಲಾಗಿದೆ. ಇದನ್ನು ಗುರಿಯಾಗಿಸಿ ‘ಬಂಕರ್ ಬಸ್ಟರ್’ ಬಾಂಬ್‌ಗಳನ್ನು ಹಾಕಲಾಗಿದೆ. ಇತರ ಪರಮಾಣು ಘಟಕಗಳನ್ನು ಗುರಿಯಾಗಿಸಿ ಟೊಮಾಹಾಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ’ ಎಂದು ಟ್ರಂಪ್ ಅವರು ‘ಫಾಕ್ಸ್ ನ್ಯೂಸ್’ಗೆ ತಿಳಿಸಿದ್ದಾರೆ.
‘ನಮ್ಮ ಭವಿಷ್ಯ ಕರಾಳವಾಗಿದೆ’: ಅಮೆರಿಕ ನಡೆಸಿದ ಬಾಂಬ್ ದಾಳಿಯಿಂದ ಇರಾನ್ ಜನತೆ ಭಯಭೀತರಾಗಿದ್ದಾರೆ.
‘ಇಸ್ರೇಲ್ ಜೊತೆಗಿನ ಈ ಸಂಘರ್ಷದಲ್ಲಿ ಈಗ ಅಮೆರಿಕ ಮಧ್ಯಪ್ರವೇಶಿಸಿರುವ ಕಾರಣ, ಯುದ್ಧ ಮತ್ತಷ್ಟು ವ್ಯಾಪಕವಾಗುವ ಆತಂಕ ಶುರುವಾಗಿದೆ. ನಮ್ಮ ಭವಿಷ್ಯ ಕರಾಳವಾಗಲಿದೆ ಎನಿಸುತ್ತದೆ’ ಎಂದು ಕಶಾನ್ ನಗರದಲ್ಲಿ ಶಿಕ್ಷಕಿಯಾಗಿರುವ 36 ವರ್ಷದ ಬಿಟಾ ಹೇಳುತ್ತಾರೆ.
ದೂರವಾಣಿ ಮೂಲಕ ರಾಯಿಟರ್ಸ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾಗಲೇ, ಸಂಪರ್ಕ ಕಡಿತಗೊಂಡಿದ್ದು ಗಮನಾರ್ಹ.
ಭೂಮಿ ಮೇಲಿನ ಯಾವ ದೇಶವೂ ಮಾಡಲಾಗದಂತಹ ಕಾರ್ಯವನ್ನು ಅಮೆರಿಕ ಮಾಡಿದೆ. ಡೊನಾಲ್ಡ್ ಟ್ರಂಪ್ ಅವರು ಕೈಗೊಂಡ ನಿರ್ಧಾರ ಇತಿಹಾಸವನ್ನೇ ಬದಲಿಸಲಿದೆಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ
ಈ ದಾಳಿ ಮೂಲಕ ಅಮೆರಿಕ ರಾಜತಾಂತ್ರಿಕತೆಗೇ ದ್ರೋಹ ಬಗೆದಿದೆ. ರಾಜತಾಂತ್ರಿಕ ಮಾರ್ಗ ಈಗ ನಮ್ಮ ಆಯ್ಕೆಯಾಗಿ ಉಳಿದಿಲ್ಲ ಅಬ್ಬಾಸ್ ಅರಾಗ್ಚಿ ಇರಾನ್ ವಿದೇಶಾಂಗ ಸಚಿವ
ಬಿ–2 ಬಾಂಬರ್ ಟೊಮಾಹಾಕ್ ಕ್ಷಿಪಣಿ ಬಳಕೆ
ರಹಸ್ಯವಾಗಿ ಕಾರ್ಯಾಚರಣೆ ನಡೆಸಿ ಶತ್ರು ರಾಷ್ಟ್ರಗಳ ಗುರಿಗಳನ್ನು ನಾಶ ಮಾಡುವ ಸಾಮರ್ಥ್ಯವುಳ್ಳ ಬಿ–2 ಯುದ್ಧ ವಿಮಾನಗಳನ್ನು ಬಳಸಿ ಬಾಂಬ್ ಹಾಕಲಾಗಿದೆ. 30 ಅತ್ಯಾಧುನಿಕ ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿ ಈ ಭೀಕರ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹಾಗೂ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಇರಾನ್‌ನ ಪರಮಾಣು ಘಟಕಗಳು ಭೂಮಿಯ ಆಳದಲ್ಲಿ ನಿರ್ಮಿಸಲಾಗಿದ್ದು ಸುಲಭವಾಗಿ ಭೇದಿಸಲು ಆಗುವುದಿಲ್ಲ. ಭಾರಿ ಪ್ರಮಾಣದ ಬಾಂಬ್ ಹಾಕಿ ಘಟಕಗಳನ್ನು ನಾಶ ಮಾಡಲಾಗಿದೆ.
ಜಲಾಂತರ್ಗಾಮಿಗಳಿಂದಲೂ ಚಿಮ್ಮಿರುವ ಕ್ಷಿಪಣಿಗಳು ನಿರ್ದೇಶಿತ ಗುರಿಗಳನ್ನು ನಾಶ ಮಾಡುವಲ್ಲಿ ಸಫಲವಾಗಿವೆ. ಟೆಹರಾನ್‌ನಿಂದ 220 ಕಿ.ಮೀ. ದೂರದಲ್ಲಿರುವ ನಟಾನ್ಜ್ ಪರಮಾಣು ಘಟಕವು ಯುರೇನಿಯಂ ಅನ್ನು ಶೇ 60ರಷ್ಟು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಅಣ್ವಸ್ತ್ರ ತಯಾರಿಕೆಯಲ್ಲಿ ಬಳಸುವ ಯುರೇನಿಯಂ ಶೇ 90ರಷ್ಟು ಶುದ್ಧೀಕರಣಗೊಂಡಿರುವುದು ಅಗತ್ಯ. ಕೋಮ್ ನಗರ ಸಮೀಪವಿರುವ ಫೋರ್ಡೊ ಘಟಕ ಹಾಗೂ ಟೆಹರಾನ್‌ನ ಆಗ್ನೇಯದಲ್ಲಿರುವ ಇಸ್‌ಫಹಾನ್ ಘಟಕದ ಮೇಲೂ ದಾಳಿ ನಡೆಸಲಾಗಿದೆ.
‘ಬಂಕರ್ ಬಸ್ಟರ್’ ಬಾಂಬ್ ಎಂದೂ ಕರೆಯಲಾಗುವ ‘ಜಿಬಿಯು–57’ (ಮ್ಯಾಸಿವ್ ಆರ್ಡನನ್ಸ್ ಪೆನೆಟ್ರೇಟರ್–ಎಂಒಪಿ) 6 ಬಾಂಬ್‌ಗಳನ್ನು ಹಾಕಲಾಗಿದೆ. ಇವುಗಳ ತೂಕ 30 ಸಾವಿರ ಪೌಂಡ್ (ಅಂದಾಜು 13500 ಕೆ.ಜಿ). ‘ಜಿಬಿಯು–57’ ಬಾಂಬ್‌ಗಳನ್ನು 60 ಮೀಟರ್ ಆಳಕ್ಕೆ ನುಗ್ಗಿ ನಂತರ ಸ್ಫೋಟವಾಗುವಂತೆ ವಿನ್ಯಾಸ ಮಾಡಲಾಗಿದೆ.
ಫೋರ್ಡೊ ಘಟಕವನ್ನು ಪರ್ವತದ 100 ಮೀಟರ್ ಆಳದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಬಿ–2 ಬಾಂಬರ್‌ಗಳ ಮಾತ್ರ ‘ಜಿಬಿಯು–57’ ಬಾಂಬ್‌ಗಳನ್ನು ಹೊತ್ತೊಯ್ದು ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಇಂಧನ ಮರುಪೂರಣ ಮಾಡದಯೇ ಈ ಬಾಂಬರ್‌ಗಳು ಎರಡು ‘ಜಿಬಿಯು–57’ ಬಾಂಬ್‌ಗಳನ್ನು ಹೊತ್ತು 9.600 ಕಿ.ಮೀ. ಕ್ರಮಿಸಬಲ್ಲವು. ಇದೇ ಮೊದಲ ಬಾರಿಗೆ ಅಮೆರಿಕ ‘ಜಿಬಿಯು–57’ ಬಾಂಬ್‌ಗಳನ್ನು ಬಳಸಿದೆ. ಟೊಮಾಹಾಕ್ ಕ್ಷಿಪಣಿಗಳನ್ನು ಯುದ್ಧನೌಕೆಗಳು ಜಲಾಂತರ್ಗಾಮಿಗಳು ಹಾಗೂ ನೆಲದಿಂದಲೂ ಉಡ್ಡಯನ ಮಾಡಬಹುದು. 1000 ಮೈಲು ದೂರದ ಗುರಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿವೆ. ಉಡ್ಡಯನ ಮಾಡಿದ ಮೇಲೂ ತನ್ನ ದಿಕ್ಕನ್ನು ಬದಲಿಸಿ ಗುರಿಗಳನ್ನು ತಲುಪುವ ಹಾಗೂ ವಾಯಪ್ರದೇಶ ರಕ್ಷಣೆ ಭೇದಿಸಿ ಮುನ್ನುಗ್ಗುವ ಸಾಮರ್ಥ್ಯವನ್ನು ಸಹ ಈ ಕ್ಷಿಪಣಿಗಳು ಹೊಂದಿವೆ.
ಹಾನಿ: ಉಪಗ್ರಹ ಚಿತ್ರಗಳಿಂದ ಬಹಿರಂಗ
‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿಸಂಸ್ಥೆಯು ಉಪಗ್ರಹ ಸೆರೆಹಿಡಿದ ಚಿತ್ರಗಳನ್ನು ಭಾನುವಾರ ವಿಶ್ಲೇಷಿಸಿದ್ದು ಅಮೆರಿಕ ನಡೆಸಿದ ದಾಳಿಯಲ್ಲಿ ಫೋರ್ಡೊ ಪರಮಾಣು ಘಟಕದ ಪ್ರವೇಶ ಮಾರ್ಗಗಳಿಗೆ ಹಾನಿಯಾಗುವುದು ಕಂಡುಬರುತ್ತದೆ ಎಂದು ಹೇಳಿದೆ. ‘ಪ್ಲಾನೆಟ್ ಲ್ಯಾಬ್ಸ್ ಪಿಬಿಸಿ’ ಸೆರೆಹಿಡಿದ ಚಿತ್ರಗಳನ್ನು ಸುದ್ದಿಸಂಸ್ಥೆ ವಿಶ್ಲೇಷಿಸಿದೆ. ಪರಮಾಣು ಘಟಕ ಇರುವ ಪರ್ವತ ಪ್ರದೇಶಕ್ಕೇ ಹಾನಿಯಾಗಿದೆ. ಒಂದೊಮ್ಮೆ ಕಂದುಬಣ್ಣದಾಗಿದ್ದ ಪರ್ವತದ ಕೆಲ ಭಾಗಗಗಳು ಬೂದು ಬಣ್ಣಕ್ಕೆ ತಿರುಗಿವೆ.
ಇದು ಆ ಸ್ಥಳದಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಅವಶೇಷಗಳು ಎಲ್ಲೆಡೆ ಹರಡಿವೆ. ಆ ಪ್ರದೇಶದಲ್ಲಿ ತಿಳಿಬೂದು ಬಣ್ಣದ ಹೊಗೆ ಆವರಿಸಿರುವುದು ಕೂಡ ಚಿತ್ರಗಳಿಂದ ತಿಳಿದುಬರುತ್ತದೆ ಎಂದೂ ಹೇಳಿದೆ. ದಾಳಿಗೂ ಮುನ್ನ ಪರಮಾಣು ಘಟಕದ ಪ್ರವೇಶ ಮಾರ್ಗಗಳನ್ನು ಇರಾನ್ ಮುಚ್ಚಿತ್ತು ಎಂಬುದು ಬೇರೆ ಉಪಗ್ರಹ ಚಿತ್ರಗಳು ಹೇಳುತ್ತವೆ. ಆದರೆ ಹಾನಿ ಪ್ರಮಾಣ ಕುರಿತು ಇರಾನ್ ಇನ್ನೂ ಯಾವ ಮಾಹಿತಿ ಹಂಚಿಕೊಂಡಿಲ್ಲ.
‘ಇಂದು ಐಎಇಎ ತುರ್ತು ಸಭೆ’
ಅಮೆರಿಕ ದಾಳಿಯಿಂದಾಗಿ ಇರಾನ್‌ನ ಮೂರು ಪರಮಾಣು ಘಟಕಗಳು ನಾಶವಾಗಿದ್ದು ಸ್ಥಳದಲ್ಲಿ ಯಾವುದೇ ವಿಕಿರಣ ಸೋರಿಕೆ ಕಂಡುಬಂದಿಲ್ಲ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಹೇಳಿದೆ. ‘ಈ ವಿದ್ಯಮಾನ ಕುರಿತು ಚರ್ಚಿಸಲು 35 ದೇಶಗಳಿರುವ ಮಂಡಳಿಯ ಸಭೆಯನ್ನು ಸೋಮವಾರ ಕರೆಯಲಾಗಿದೆ’ ಎಂದು ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ.
‘ಫೋರ್ಡೊ ಪರಮಾಣು ಘಟಕದಲ್ಲಿದ್ದ ಗರಿಷ್ಠ ಮಟ್ಟದಲ್ಲಿ ಶುದ್ಧೀಕರಣಗೊಳಿಸಲಾಗಿದ್ದ ಯುರೇನಿಯಂ ಅನ್ನು ದಾಳಿಗೂ ಮುನ್ನವೇ ಬೇರೆಡೆ ಸ್ಥಳಾಂತರಿಸಲಾಗಿದೆ. ಈ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಂಖ್ಯೆಯನ್ನು ಸಹ ಕಡಿಮೆ ಮಾಡಲಾಗಿದೆ’ ಎಂದು ಇರಾನ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ‘ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವ ತನ್ನ ಕಾರ್ಯವನ್ನು ಸ್ಥಗಿತಗೊಳಿಸುವುದಿಲ್ಲ’ ಎಂದು ಇರಾನ್ ಅಣುಶಕ್ತಿ ಸಂಘಟನೆ (ಐಎಇಒ) ಹೇಳಿದೆ.
ಯುದ್ಧ ವ್ಯಾಪಕವಾಗುವ ಆತಂಕ: ವಿಶ್ವಸಂಸ್ಥೆ
‘ಇರಾನ್ ಮೇಲಿನ ಅಮೆರಿಕ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಅಪಾಯಕಾರಿಯಾಗುವಷ್ಟು ಉಲ್ಬಣಿಸಲಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ‘ಈ ಸಂಘರ್ಷ ನಿಯಂತ್ರಣ ತಪ್ಪುವ ಅಪಾಯವಿದ್ದು ಪಶ್ಚಿಮ ಏಷ್ಯಾ ಪ್ರದೇಶಕ್ಕೆ ಮಾತ್ರವಲ್ಲ ಜಗತ್ತಿನ ಮೇಲೂ ಭೀಕರ ಪರಿಣಾಮಗಳನ್ನು ಉಂಟು ಮಾಡಲಿದೆ’ ಎಂದು ಗುಟೆರಸ್ ಹೇಳಿದ್ದಾರೆ.
ಪರಸ್ಪರರ ಮೇಲೆ ದಾಳಿ
ಶನಿವಾರ ರಾತ್ರಿ ಇಸ್ರೇಲ್ ಮೇಲೆ ಖೋರ‍್ರಾಮ್‌ಶಹ್ರ್–4 ಸೇರಿದಂತೆ 40 ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ‘ನಮ್ಮ ಸಾಮರ್ಥ್ಯಗಳನ್ನು ಇನ್ನೂ ಸಂಪೂರ್ಣವಾಗಿ ಬಳಸಿ ಕಾರ್ಯಾಚರಣೆ ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ದಾಳಿಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು’ ಎಂದಿದೆ. ದೇಶದ ಕೇಂದ್ರ ಹಾಗೂ ಉತ್ತರ ಭಾಗಗಳ ಕೆಲ ಪ್ರದೇಶಗಳ ಮೇಲೆ ಇರಾನ್ ಭಾನುವಾರ ಕ್ಷಿಪಣಿ ದಾಳಿ ನಡೆಸಿದ್ದು 86 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ಹೇಳಿದೆ.
ಟೆಲ್ ಅವೀವ್‌ನಲ್ಲಿ ಹೆಚ್ಚು ಹಾನಿಯಾಗಿದೆ. ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಪ್ರತಿ ದಾಳಿ ಆರಂಭಿಸಲಾಗಿದೆ. ಇರಾನ್‌ನ ಪಶ್ಚಿಮ ಭಾಗದಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇರಾನ್‌ನ ಡೆಜ್‌ಫುಲ್ ವಿಮಾನನಿಲ್ದಾಣದಲ್ಲಿದ್ದ ವಿಮಾನವೊಂದಕ್ಕೆ ಹಾನಿ ಮಾಡಲಾಗಿದೆ. ಎರಡು ಎಫ್–5 ಯುದ್ಧವಿಮಾನಗಳನ್ನು ಕೂಡ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಈ ಕುರಿತು ಇರಾನ್ ಪ್ರತಿಕ್ರಿಯಿಸಿಲ್ಲ.
ಪ್ರತೀಕಾರ: ಇರಾನ್ ಶಪಥ ತನ್ನ ಮೂರು ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿರುವ ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಭಾನುವಾರ ಶಪಥ ಮಾಡಿದ್ದು ‘ತಾನು ನೀಡುವ ಪ್ರತ್ಯುತ್ತರ ಶಾಶ್ವತ ಪರಿಣಾಮವನ್ನುಂಟು ಮಾಡಲಿದೆ’ ಎಂದು ಹೇಳಿದೆ.
ಅಮೆರಿಕ ದಾಳಿಗೆ ಪ್ರತಿಕ್ರಿಯಿಸಿರುವ ಅವರು ‘ಇರಾನ್‌ನ ಪರಮಾಣು ಘಟಕಗಳ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕವು ವಿಶ್ವಸಂಸ್ಥೆ ಸನ್ನದು ಅಂತರರಾಷ್ಟ್ರೀಯ ಕಾನೂನು ಮತ್ತು ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದದ (ಎನ್‌ಪಿಟಿ) ಉಲ್ಲಂಘನೆ ಮಾಡಿದೆ’ ಎಂದು ಹೇಳಿದ್ದಾರೆ. ಅಮೆರಿಕದ ಯುದ್ಧದಾಹಿ ಹಾಗೂ ಅರಾಜಕತೆಯಿಂದ ಕೂಡಿದ ಆಡಳಿತವೇ ಬಾಂಬ್ ದಾಳಿಗೆ ಹೊಣೆ ಎಂದಿದ್ದಾರೆ. ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಮೆರಿಕ ದಾಟದೇ ಇರುವಂತಹ ಯಾವ ಮಿತಿಯೂ ಇಲ್ಲ. ದೇಶದ ಪರಮಾಣು ಘಟಕಗಳ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ಎಲ್ಲ ಮಿತಿಗಳನ್ನು ಮೀರಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಾಸ್ಕೊಗೆ ತೆರಳಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಈ ವಿದ್ಯಮಾನಗಳ ಕುರಿತು ಚರ್ಚಿಸುವೆ‘ ಎಂದೂ ಅಬ್ಬಾಸ್ ಹೇಳಿದ್ದಾರೆ.
ಖಮೇನಿ ಗುರಿ ಮಾಡಿದರೆ ಭೀಕರ ಪರಿಣಾಮ: ‘ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಗುರಿ ಮಾಡುವ ಯಾವುದೇ ಪ್ರಯತ್ನಗಳು ಅಪಾಯಕಾರಿ ಪರಿಣಮಿಸಲಿವೆ’ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. ‘ಇಂತಹ ನಡೆಯಿಂದ ಯಾವುದೇ ಮಾತುಕತೆ ಅಥವಾ ಒಪ್ಪಂದಕ್ಕೆ ಸಂಬಂಧಿಸಿದ ಬಾಗಿಲು ಬಂದ್ ಆಗುವುದು. ‘ಅನಿಯಮಿತ ಪ್ರತ್ಯುತ್ತರ’ಕ್ಕೆ ದಾರಿ ಮಾಡಿಕೊಡುವುದು’ ಎಂದು ಹೇಳಿದ್ದಾರೆ.
ಎಡಪಕ್ಷಗಳ ಟೀಕೆ
ನವದೆಹಲಿ: ಇರಾನ್ ಮೇಲಿನ ಬಾಂಬ್ ದಾಳಿಯನ್ನು ಖಂಡಿಸಿರುವ ಎಡಪಕ್ಷಗಳು‘ಅಮೆರಿಕದ ಈ ನಡೆ ಇರಾನ್‌ನ ಸಾರ್ವಭೌಮತೆ ಹಾಗೂ ವಿಶ್ವಸಂಸ್ಥೆಯ ಸನ್ನದುವಿನ ಗಂಭೀರ ಉಲ್ಲಂಘನೆ’ ಎಂದು ಭಾನುವಾರ ಟೀಕಿಸಿವೆ.
‘ಈ ದಾಳಿಯು ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆಗೆ ಕಾರಣವಾಗಲಿದೆ. ಪಶ್ಚಿಮ ಏಷ್ಯಾದಲ್ಲಿ ಅಸ್ಥಿರತೆ ಉಂಟು ಮಾಡುವ ಜೊತೆಗೆ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ’ ಎಂದು ಸಿಪಿಎಂ ಸಿಪಿಐ ಸಿಪಿಐಎಂಎಲ್ ಆರ್‌ಎಸ್‌ಪಿ ಹಾಗೂ ಫಾರ್ವರ್ಡ್ ಬ್ಲಾಕ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಮೆರಿಕ ಪರ ಮತ್ತು ಇಸ್ರೇಲ್ ಪರ ವಿದೇಶಾಂಗ ನೀತಿಯನ್ನು ಕೈಬಿಡಬೇಕು. ಪಶ್ಚಿಮ ಏಷ್ಯಾದಲ್ಲಿನ ಯುದ್ಧ ನಿಲ್ಲಿಸಲು ಜಾಗತಿಕವಾಗಿ ನಡೆಯುವ ಪ್ರಯತ್ನಗಳಿಗೆ ಕೈಜೋಡಿಸಬೇಕು’ ಎಂದು ಎಂ.ಎ.ಬೇಬಿ(ಸಿಪಿಎಂ) ಡಿ.ರಾಜಾ(ಸಿಪಿಐ) ದೀಪಾಂಕರ ಭಟ್ಟಾಚಾರ್ಯ (ಸಿಪಿಐಎಂಎಲ್–ಎಲ್) ಮನೋಜ್ ಭಟ್ಟಾಚಾರ್ಯ (ಆರ್‌ಎಸ್‌ಪಿ) ಜಿ.ದೇವರಾಜನ್(ಫಾರ್ವರ್ಡ್ ಬ್ಲಾಕ್) ಒತ್ತಾಯಿಸಿದ್ದಾರೆ.
ದಿನದ ಬೆಳವಣಿಗೆ
ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಇಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ.
ದಾಳಿಗೆ ಬಿ–2 ಬಾಂಬರ್, ಟೊಮಾಹಾಕ್ ಕ್ಷಿಪಣಿ ಬಳಕೆ
ಆಡಳಿತ ಬದಲಾವಣೆಗೆ ಇರಾನ್ ಮೇಲೆ ದಾಳಿ ನಡೆಸಿಲ್ಲ– ಅಮೆರಿಕ
ಪರಮಾಣು ಘಟಕಗಳ ಸ್ಥಳದಲ್ಲಿ ಯಾವುದೇ ವಿಕಿರಣ ಸೋರಿಕೆ ಕಂಡುಬಂದಿಲ್ಲ: ಐಎಇಎ
ಹೊರ್ಮುಜ್ ಜಲಸಂಧಿ ಬಂದ್ ಮಾಡಲು ಇರಾನ್ ಚಿಂತನೆ
ಇಸ್ರೇಲ್ ಮೇಲೆ ಖೋರ‍್ರಾಮ್‌ಶಹ್ರ್–4 ಸೇರಿದಂತೆ 40 ಕ್ಷಿಪಣಿಗಳಿಂದ ಇರಾನ್ ದಾಳಿ
ವಿಶ್ವ ನಾಯಕರ ಪ್ರತಿಕ್ರಿಯೆಗಳು
ಅಂತರರಾಷ್ಟ್ರೀಯ ಭದ್ರತೆಗೆ ಇರಾನ್‌ನ ಪರಮಾಣು ಕಾರ್ಯಕ್ರಮ ದೊಡ್ಡ ಬೆದರಿಕೆಯಾಗಿದೆ. ಈ ದಾಳಿ ಮೂಲಕ ಅಮೆರಿಕ ಬೆದರಿಕೆಯನ್ನು ಹೋಗಲಾಡಿಸಿದೆ. ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಲು ಇರಾನ್‌ಗೆ ಎಂದಿಗೂ ಅವಕಾಶ ನೀಡಬಾರದು–ಕೀಯರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ
ಪಶ್ಚಿಮ ಏಷ್ಯಾದಲ್ಲಿನ ಈ ಉದ್ವಿಗ್ನತೆಯನ್ನು ತ್ವರಿತವಾಗಿ ಶಮನ ಮಾಡುವುದು ಮುಖ್ಯ. ಇದು ತೀವ್ರ ಕಳವಳಕಾರಿ ಬೆಳವಣಿಗೆಯಾಗಿದ್ದು ನಾವು ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದೇವೆ– ಶಿಗೆರು ಇಶಿಬಾ ಜಪಾನ್ ಪ್ರಧಾನಿ
ಉದ್ವಿಗ್ನತೆ ತಗ್ಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ದೇಶಗಳು ಮಾತುಕತೆಗೆ ಮುಂದಾಗಬೇಕು. ಅಮೆರಿಕ ದಾಳಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿ ಕುರಿತು ಐರೋಪ್ಯ ಒಕ್ಕೂಟವು ಸೋಮವಾರ ಚರ್ಚಿಸಲಿದೆ –ಕಜಾ ಕಲ್ಲಾಸ್ ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ
ಅಣ್ವಸ್ತ್ರ ತಯಾರಿಕೆಯು ಇಡೀ ಪ್ರದೇಶಕ್ಕೆ ಬೆದರಿಕೆ ಒಡ್ಡಿತ್ತು. ಅಮೆರಿಕ ನಡೆಸಿದ ದಾಳಿ ಪರಿಣಾಮ ಸಂಘರ್ಷ ತಗ್ಗುವುದು ಹಾಗೂ ಶಾಂತಿ ಒಪ್ಪಂದ ಕುರಿತು ಇರಾನ್ ಮಾತುಕತೆಗೆ ಮುಂದಾಗಲಿದೆ ಎಂಬ ಆಶಯ ಹೊಂದಿದ್ದೇವೆ– ಆ್ಯಂಟೊನಿಯೊ ತಜಾನಿ ಇಟಲಿ ವಿದೇಶಾಂಗ ಸಚಿವ
ಮಧ್ಯಪ್ರಾಚ್ಯದಲ್ಲಿ ಬೆಳವಣಿಗೆಗಳು ಆತಂಕ ಮೂಡಿಸಿವೆ. ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ನ್ಯೂಜಿಲೆಂಡ್ ಬೆಂಬಲಿಸುತ್ತದೆ. ಮಿಲಿಟರಿ ಕಾರ್ಯಾಚರಣೆಗಿಂತ ರಾಜತಾಂತ್ರಿಕೆಯೇ ಸುಸ್ಥಿರ ಪರಿಹಾರ ನೀಡಬಲ್ಲದು– ವಿನ್ಸ್‌ಟನ್ ಪೀಟರ್ಸ್ ನ್ಯೂಜಿಲೆಂಡ್ ವಿದೇಶಾಂಗ ಸಚಿವ
ಇರಾನ್‌ನ ಅಣ್ವಸ್ತ್ರ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಜಾಗತಿಕ ಶಾಂತಿ ಮತ್ತು ಸುರಕ್ಷತೆಗೆ ಅಪಾಯ ಎಂಬುದು ನಮ್ಮ ಸ್ಪಷ್ಟ ನಿಲುವಾಗಿತ್ತು. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಸಂಘರ್ಷ ಶಮನ ಮಾಡುವಂತೆ ಒತ್ತಾಯಿಸುತ್ತೇವೆ– ಆಸ್ಟ್ರೇಲಿಯಾ ಸರ್ಕಾರದ ವಕ್ತಾರ
ಇರಾಕ್ ವಿಚಾರದಲ್ಲಿ ಮಾಡಿದ್ದ ತಪ್ಪನ್ನು ಇರಾನ್ ವಿಷಯದಲ್ಲಿ ಅಮೆರಿಕ ಪುನರಾವರ್ತನೆ ಮಾಡುವುದೇ? ಅಮೆರಿಕದ ನಡೆಸಿರುವ ಈ ದಾಳಿ ಅಪಾಯಕಾರಿಯಾಗಲಿದೆ. ಇಂತಹ ದಾಳಿಗಳು ಮಧ್ಯ ಪ್ರಾಚ್ಯದಲ್ಲಿ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಿದ್ದನ್ನು ಇತಿಹಾಸ ಹೇಳುತ್ತದೆ. ಮಾತುಕತೆ ಮೂಲಕ ಶಾಂತಿ ಸ್ಥಿರತೆ ಕಾಪಾಡುವುದು ಆದ್ಯತೆಯಾಗಲಿ–ಚೀನಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.