ADVERTISEMENT

ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ: ಒಪ್ಪಂದಕ್ಕೆ ಟ್ರಂ‍ಪ್ ಸಹಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 6:33 IST
Last Updated 19 ಡಿಸೆಂಬರ್ 2025, 6:33 IST
<div class="paragraphs"><p>ಡೊನಾಲ್ಡ್ ಟ್ರಂ‍ಪ್, ಅಮೆರಿಕ ಅಧ್ಯಕ್ಷ</p></div>

ಡೊನಾಲ್ಡ್ ಟ್ರಂ‍ಪ್, ಅಮೆರಿಕ ಅಧ್ಯಕ್ಷ

   

ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಸಹಿ ಹಾಕಿದ್ದು, ಅದು ಕಾಯ್ದೆಯಾಗಿ ಜಾರಿಗೆ ಬರಲಿದೆ.

ADVERTISEMENT

ಇಂಡೊ-ಪೆಸಿಫಿಕ್ ಪ್ರದೇಶದ ಮುಕ್ತ ವಾತಾವರಣಕ್ಕೆ ಬದ್ಧವಾದ ಉದ್ದೇಶವನ್ನು ಮುನ್ನಡೆಸಲು ಮತ್ತು ಚೀನಾ ಒಡ್ಡಿದ ಸವಾಲನ್ನು ಪರಿಹರಿಸಲು ಕ್ವಾಡ್ ಮೂಲಕವೂ ಸೇರಿದಂತೆ ಭಾರತದೊಂದಿಗೆ ಅಮೆರಿಕದ ಸಂಬಂಧವನ್ನು ವಿಸ್ತರಿಸುವ ಗುರಿಯನ್ನೂ ಈ ಮಸೂದೆ ಹೊಂದಿದೆ.

ಗುರುವಾರ ಕಾನೂನಾಗಿ ಅಂಗೀಕರಿಸಲಾದ 2026ರ ಹಣಕಾಸು ವರ್ಷದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಯು, ಯುದ್ಧ ಇಲಾಖೆ (ಡಿಒಡಬ್ಲ್ಯು), ಇಂಧನ ಇಲಾಖೆಯ ರಾಷ್ಟ್ರೀಯ ಭದ್ರತಾ ಕಾರ್ಯಕ್ರಮಗಳು, ವಿದೇಶಾಂಗ ಇಲಾಖೆ, ಗೃಹ ಭದ್ರತಾ ಇಲಾಖೆ, ಗುಪ್ತಚರ ಮತ್ತು ಇತರ ಕಾರ್ಯನಿರ್ವಾಹಕ ಇಲಾಖೆಗಳು ಹಾಗೂ ಏಜೆನ್ಸಿಗಳಿಗೆ ಹಣಕಾಸು ವಿನಿಯೋಗಕ್ಕೆ ಅಧಿಕಾರ ನೀಡುತ್ತದೆ.

‘ಯುದ್ಧ ಇಲಾಖೆಯು ತನ್ನ ಶಕ್ತಿ ಮೂಲಕ ಶಾಂತಿ ಕಾರ್ಯಸೂಚಿಯನ್ನು ನಿರ್ವಹಿಸಲು, ದೇಶೀಯ ಮತ್ತು ವಿದೇಶಿ ಬೆದರಿಕೆಗಳಿಂದ ತಾಯ್ನಾಡನ್ನು ರಕ್ಷಿಸಲು ಮತ್ತು ರಕ್ಷಣಾ ಕೈಗಾರಿಕಾ ನೆಲೆಯನ್ನು ಬಲಪಡಿಸಲು ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ, ಅದೇ ಸಮಯದಲ್ಲಿ ನಮ್ಮ ರಾಷ್ಟ್ರದ ಯುದ್ಧ ಹೋರಾಟದ ಮನೋಭಾವವನ್ನು ದುರ್ಬಲಗೊಳಿಸುವ ವ್ಯರ್ಥ ಕಾರ್ಯಕ್ರಮಗಳಿಗೆ ಹಣಕಾಸು ನೆರವನ್ನು ತೆಗೆದುಹಾಕುತ್ತದೆ’ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕಾಯ್ದೆಯು 'ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣಾ ಮೈತ್ರಿಗಳು ಮತ್ತು ಪಾಲುದಾರಿಕೆಗಳ ಕುರಿತು ಅಮೆರಿಕ ಸಂಸತ್ತಿನ ಪ್ರಜ್ಞೆಯನ್ನು' ವಿವರಿಸುತ್ತದೆ ಎಂದು ಅದು ಹೇಳಿದೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿಯು, ಚೀನಾ ಜೊತೆಗಿನ ಕಾರ್ಯತಂತ್ರದ ಸ್ಪರ್ಧೆಯಲ್ಲಿ ಅಮೆರಿಕದ ತುಲನಾತ್ಮಕ ಪ್ರಯೋಜನವನ್ನು ಹೆಚ್ಚಿಸಲು ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕದ ರಕ್ಷಣಾ ಮೈತ್ರಿಗಳು ಮತ್ತು ಪಾಲುದಾರಕಾ ದೇಶಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಕಾಯ್ದೆ ಹೇಳುತ್ತದೆ.

‘ರಕ್ಷಣೆಗೆ ಸಂಬಂಧಿಸಿದ ದ್ವಿಪಕ್ಷೀಯ ಮತ್ತು ಬಹುಪಕ್ಷೀಯವಾಗಿ ತೊಡಗಿಸಿಕೊಳ್ಳುವಿಕೆ ಹಾಗೂ ಮಿಲಿಟರಿ ತಾಲೀಮುಗಳಲ್ಲಿ ಭಾಗವಹಿಸುವಿಕೆ, ವಿಸ್ತೃತ ರಕ್ಷಣಾ ವ್ಯಾಪಾರ ಮತ್ತು ಮಾನವೀಯ ನೆರವು ಹಾಗೂ ವಿಪತ್ತು ಸ್ಪಂದನೆಯ ಸಹಯೋಗದ ಮೂಲಕ ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವಾತಾವರಣಕ್ಕೆ ಬದ್ಧವಾದ ಉದ್ದೇಶವನ್ನು ಮುನ್ನಡೆಸಲು ಕ್ವಾಡ್ ಭದ್ರತಾ ಮಾತುಕತೆಗಳ ಮೂಲಕ ಭಾರತದೊಂದಿಗೆ ಅಮೆರಿಕದ ಸಂಬಂಧ ವಿಸ್ತರಿಸುವುದು ಮತ್ತು ಕಡಲ ಭದ್ರತೆಯಲ್ಲಿ ಹೆಚ್ಚಿನ ಸಹಕಾರವನ್ನು ಸಕ್ರಿಯಗೊಳಿಸುವುದನ್ನು ಕಾಯ್ದೆ ಒಳಗೊಂಡಿದೆ’ ಎಂದು ಪ್ರಕಟಣೆ ತಿಳಿಸಿದೆ.

ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಎದುರಿಸಲು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ಕ್ವಾಡ್ ಅಥವಾ ಚತುರ್ಭುಜ ಭದ್ರತಾ ಗುಂಪನ್ನು 2017ರಲ್ಲಿ ಸ್ಥಾಪಿಸಲಾಗಿತ್ತು,.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.