ADVERTISEMENT

ವೃತ್ತಿ ಆಧಾರಿತ ವೀಸಾಗೆ ವರ್ಷದ ಅಂತ್ಯದವರೆಗೂ ನಿಷೇಧ ಹೇರಿದ ಟ್ರಂಪ್

ಪಿಟಿಐ
Published 23 ಜೂನ್ 2020, 7:07 IST
Last Updated 23 ಜೂನ್ 2020, 7:07 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌    

ವಾಷಿಂಗ್ಟನ್: ವೃತ್ತಿ ಆಧಾರಿತ ಹೊಸ ವೀಸಾಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ತಾತ್ಕಾಲಿಕ ನಿಷೇಧ ಹೇರಿದ್ದಾರೆ. ಉದ್ಯೋಗಕ್ಕಾಗಿ ಅಮೆರಿಕ ಪ್ರವೇಶಿಸುವ ವಲಸಿಗರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ವೀಸಾ ನಿಷೇಧ ವರ್ಷದ ಕೊನೆಯವರೆಗೂ ಮುಂದುವರಿಯಲಿದೆ. ಎಚ್–1ಬಿ ವೀಸಾ ಅಡಿಯಲ್ಲಿ ಅಮೆರಿಕ ಪ್ರವೇಶಿಸಿರುವ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಹಾಗೂ ಇತರೆ ಕೌಶಲ ಆಧಾರಿತ ಕೆಲಸಗಾರರು, ಆತಿಥ್ಯ ಸೇವೆಗಳ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಉದ್ಯೋಗ ಮತ್ತು ಬೇಸಿಗೆ ಕಾರ್ಯಕ್ರಮಗಳಡಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಕುಟುಂಬದ ಸಹಾಯಕರಾಗಿ ಬಂದಿರುವವರಿಗೆ ವೀಸಾ ನಿರ್ಬಂಧ ಎದುರಾಗಿದೆ.

ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿಯರ ಪತಿ ಅಥವಾ ಪತ್ನಿಗೆ ವೀಸಾ ನಿರ್ಬಂಧಿಸಲಾಗಿದೆ. ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು, ಜಾಗತಿಕವಾಗಿ ಕಾರ್ಯಾಚರಿಸುತ್ತಿರುವ ಅಮೆರಿಕದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಅಮೆರಿಕಕ್ಕೆ ವರ್ಗಾಯಿಸುವುದರ ಮೇಲೆ ನಿರ್ಬಂಧ ವಿಧಿಸಿದೆ.

ADVERTISEMENT

ವೃತ್ತಿ ಆಧಾರಿತ ವೀಸಾಗಳ ಮೇಲಿನ ನಿಷೇಧ ಹಾಗೂ ಹೊಸದಾಗಿ ಗ್ರೀನ್‌ ಕಾರ್ಡ್‌ ನೀಡುವುದಕ್ಕೂ ನಿರ್ಬಂಧ ವಿಸ್ತರಿಸಿರುವುದರಿಂದ ಸುಮಾರು 5,25,000 ವಿದೇಶಿ ಉದ್ಯೋಗಿಗಳಿಗೆ ಆತಂಕ ಎದುರಾಗಿದೆ.

'ಅಮೆರಿಕದ ಆರ್ಥಿಕ ಉನ್ನತಿಗಾಗಿ ವಲಸಿಗರು ಅಪಾರವಾದ ಕೊಡುಗೆ ನೀಡಿದ್ದಾರೆ. ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಿ ಬೆಳೆಸಿದ್ದಾರೆ ಹಾಗೂ ಗೂಗಲ್‌ ಕಂಪನಿಯನ್ನೂ ಸಹ' ಎಂದು ಗೂಗಲ್‌ ಸಿಇಒ ಭಾರತ–ಅಮೆರಿಕನ್‌ ಸುಂದರ್‌ ಪಿಚೈ ಟ್ವೀಟ್‌ ಮಾಡಿದ್ದಾರೆ.

ಹೊಸ ಆದೇಶದಿಂದಾಗಿ ಸಂಸ್ಥೆಗಳಿಗೆ ಅವಶ್ಯವಾಗಿರುವ ಕಾರ್ಯಗಳಿಗೆ ಸೂಕ್ತ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಮೆರಿಕನ್ನರು ಮಾಡಲು ಸಮರ್ಥರಲ್ಲದ ಅಥವಾ ಮಾಡಲು ಇಚ್ಛಿಸದ ಕಾರ್ಯಗಳಿಗೆ ಕೆಲಸಗಾರರನ್ನು ನೇಮಿಸಿಕೊಳ್ಳುವುದಕ್ಕೆ ಆದೇಶದಿಂದಾಗಿ ತಡೆ ಉಂಟಾಗಲಿದೆ ಎಂದು ಉದ್ಯಮಿಗಳು ಹೇಳಿದ್ದಾರೆ.

'ಅಮೆರಿಕದ ಹೊಸತನ ಹಾಗೂ ಜಗತ್ತಿನಾದ್ಯಂತ ಇರುವ ಕ್ರಿಯಾಶೀಲ ವ್ಯಕ್ತಿಗಳನ್ನು ಸೆಳೆದು ಅದರಿಂದ ಅನುಕೂಲ ಮಾಡಿಕೊಳ್ಳುವ ದೇಶದ ಸಾಮರ್ಥ್ಯಕ್ಕೆ ಧಕ್ಕೆ ಉಂಟಾಗಿದೆ' ಎಂದು ಎಫ್‌ಡಬ್ಲ್ಯುಡಿ.ಯುಎಸ್‌ನ ಅಧ್ಯಕ್ಷ ಟಾಡ್‌ ಶಲ್ಟಿ ಹೇಳಿದ್ದಾರೆ. ಎಫ್‌ಡಬ್ಲ್ಯುಡಿ.ಯುಎಸ್‌ ತಂತ್ರಜ್ಞಾನ ಕಂಪನಿಗಳ ಬೆಂಬಲ ಹೊಂದಿರುವ ವಲಸಿಗರ ಪರವಾದ ಸಂಘಟನೆಯಾಗಿದೆ.

ಈಗಾಗಲೇ ಸೂಕ್ತ ವೀಸಾ ಹೊಂದಿರುವ ವಿದೇಶಿಯರಿಗೆ ಟ್ರಂಪ್‌ ಹೊರಡಿಸಿರುವ ಹೊಸ ಆದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊರೊನಾ ವೈರಸ್‌ ಸಂಶೋಧನೆಗಳಲ್ಲಿ ತೊಡಗಿರುವ ಕೆಲವು ವೈದ್ಯಕೀಯ ಸಿಬ್ಬಂದಿಗೂ ಇದರಿಂದ ವಿನಾಯಿತಿ ಸಿಗಲಿದೆ ಎಂದಿದ್ದಾರೆ.

ಟ್ರಂಪ್‌ ಅವರ ರೆಸಾರ್ಟ್‌ಗಳಲ್ಲಿ ಅಡುಗೆ ಮತ್ತು ಪರಿಚಾರಕ ಸೇವೆಗಳಿಗೆ ಎಚ್‌–2ಬಿ ವೀಸಾ ಮೂಲಕ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.