ಬ್ರಿಜ್‌ವಾಟರ್ (ಅಮೆರಿಕ): ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಈ ವಾರ ಭೇಟಿಯಾಗಲಿದ್ದಾರೆ. ನ್ಯಾಟೊ ಮಿತ್ರ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುವ ಯೋಜನೆಯನ್ನು ಟ್ರಂಪ್ ಘೋಷಿಸಿದ ಬೆನ್ನಲ್ಲೇ ಈ ಭೇಟಿ ನಡೆಯಲಿದೆ.
ಸೋಮವಾರ ಮತ್ತು ಮಂಗಳವಾರ ವಾಷಿಂಗ್ಟನ್ ಭೇಟಿಯಲ್ಲಿರುವ ರುಟ್ಟೆ ಅವರು ಟ್ರಂಪ್ ಅಲ್ಲದೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ಜತೆಯೂ ಮಾತುಕತೆ ನಡೆಸಲಿದ್ದಾರೆ. ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆಯ ಸಂಬಂಧ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾ–ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ‘ಪ್ರಮುಖ ಹೇಳಿಕೆ’ ನೀಡುವುದಾಗಿ ಟ್ರಂಪ್ ಪ್ರಕಟಿಸಿರುವ ಸಂದರ್ಭದಲ್ಲೇ ರುಟ್ಟೆ ಅವರ ಭೇಟಿ ನಿಗದಿಯಾಗಿದೆ. ರಷ್ಯಾದ ವಾಯು ದಾಳಿಯನ್ನು ಸಮರ್ಥವಾಗಿ ಎದುರಿಸಲು ಹೆಣಗಾಡುತ್ತಿರುವ ಉಕ್ರೇನ್‌ಗೆ ನ್ಯಾಟೊ ಮೂಲಕ ನೆರವಾಗಲು ಟ್ರಂಪ್ ಬಯಸಿದ್ದಾರೆ.
ರಷ್ಯಾದ ದಾಳಿ ಎದುರಿಸಲು ಉಕ್ರೇನ್‌ಗೆ ಪೇಟ್ರಿಯಟ್ ವಾಯು ರಕ್ಷಣಾ ವ್ಯವಸ್ಥೆಯನ್ನು ಪೂರೈಕೆ ಮಾಡುವುದಾಗಿ ಟ್ರಂಪ್ ಭಾನುವಾರ ಹೇಳಿದ್ದರು. ‘ಪುಟಿನ್ ಒಳ್ಳೆಯ ಮಾತುಗಳನ್ನಾಡುತ್ತಾರೆ. ಆ ಬಳಿಕ ಎಲ್ಲರ ಮೇಲೆ ಬಾಂಬ್ ಹಾಕುತ್ತಾರೆ’ ಎಂದು ರಷ್ಯಾದ ಅಧ್ಯಕ್ಷರನ್ನು ಟೀಕಿಸಿದ್ದರು.
ಕೀವ್‌ಗೆ ಬಂದ ಕೆಲಾಗ್: ಉಕ್ರೇನ್ ಮತ್ತು ರಷ್ಯಾಕ್ಕೆ ಅಮೆರಿಕ ಅಧ್ಯಕ್ಷರ ವಿಶೇಷ ಪ್ರತಿನಿಧಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ಕೀತ್ ಕೆಲಾಗ್ ಅವರು ಸೋಮವಾರ ಕೀವ್‌ಗೆ ಬಂದಿಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.