ಪಾಮ್ ಬೀಚ್: ಕೆನಡಾ ಮತ್ತು ಮೆಕ್ಸಿಕೊ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತಗಳ ಮೇಲೆ ಶೇ 25ರಷ್ಟು ಮತ್ತು ಚೀನಾದ ವಸ್ತುಗಳ ಮೇಲೆ ಶೇ 10ರಷ್ಟು ಸುಂಕವನ್ನು ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ. ಮಂಗಳವಾರದಿಂದ ಈ ಪರಿಷ್ಕೃತ ಸುಂಕವು ಆಯಾ ದೇಶಗಳ ಮೇಲೆ ಜಾರಿಯಾಗಲಿದೆ.
ಅಮೆರಿಕದ ಈ ಕ್ರಮವನ್ನು ಮೂರೂ ದೇಶಗಳು ಖಂಡಿಸಿವೆ. ಇದಕ್ಕೆ ಪ್ರತಿಕಾರವಾಗಿ ಕ್ರಮ ಕೈಗೊಳ್ಳುವುದಾಗಿ ಈ ದೇಶಗಳು ಹೇಳಿವೆ. ಅದರಂತೆ, 106.6 ಬಿಲಿಯನ್ ಡಾಲರ್‌ನಷ್ಟು (ಸುಮಾರು ₹9.24 ಲಕ್ಷ ಕೋಟಿ) ಮೊತ್ತದ ಅಮೆರಿಕದ ವಸ್ತುಗಳ ಮೇಲೆ ಕೆನಡಾವು ಶೇ 25ರಷ್ಟು ಆಮದು ಸುಂಕ ವಿಧಿಸಲು ನಿರ್ಧರಿಸಿದೆ. ಮೆಕ್ಸಿಕೊ ಕೂಡ ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮದ ಕೈಗೊಳ್ಳುವ ಘೋಷಣೆ ಮಾಡಿದೆ. ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡುವುದಾಗಿ ಚೀನಾ ಹೇಳಿದೆ.
ಈ ಮೂರು ದೇಶಗಳಿಂದ ಅಮೆರಿಕಕ್ಕೆ ಆಮದಾಗುತ್ತಿದ್ದ ಕಡಿಮೆ ಬೆಲೆಯ ವಸ್ತುಗಳ ಮೇಲಿನ ಸುಂಕ ವಿನಾಯಿತಿಯನ್ನೂ ಟ್ರಂಪ್ ಅವರು ರದ್ದು ಮಾಡಿದ್ದಾರೆ. ಆದರೆ, ಅಮೆರಿಕಕ್ಕೆ ಕೆನಡಾದಿಂದ ಬರುತ್ತಿರುವ ವಿದ್ಯುತ್ ಸಂಪನ್ಮೂಲ ಮತ್ತು ತೈಲಗಳ ಮೇಲಿನ ಸುಂಕದಲ್ಲಿ ಮಾತ್ರ ಯಾವುದೇ ಏರಿಕೆಯನ್ನು ಅಲ್ಲಿನ ಸರ್ಕಾರ ಘೋಷಿಸಿಲ್ಲ.
‘ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ’ಯ ಅನ್ವಯ ಟ್ರಂಪ್ ಅವರು ಈ ಆದೇಶ ಹೊರಡಿಸಿದ್ದಾರೆ. ‘ರಾಷ್ಟ್ರದ ಹಿತವನ್ನು ಕಾಪಾಡಲು ಸುಂಕವು ಅತ್ಯಂತ ಶಕ್ತಿಯುತ ಮಾಧ್ಯಮವಾಗಿದೆ. ಅಕ್ರಮ ವಲಸಿಗರು ಮತ್ತು ಮಾದಕವಸ್ತುಗಳು ಅದರಲ್ಲೂ ಪ್ರಮುಖವಾಗಿ ಫೆಂಟನೆಲ್, ಅಮೆರಿಕವನ್ನು ಪ್ರವೇಶಿಸದಂತೆ ತಡೆಯಲು ಈ ಆದೇಶ ಹೊರಡಿಸಲಾಗಿದೆ’ ಎಂದು ಶ್ವೇತ ಭವನ ಹೇಳಿದೆ.
ಈ ವಾರದಲ್ಲಿ ಯುರೋಪಿಯನ್ ಯೂನಿಯನ್‌ನ ದೇಶಗಳ ಮೇಲೆಯೂ ಸುಂಕ ವಿಧಿಸುತ್ತೇನೆ ಎಂದು ಟ್ರಂಪ್ ಅವರು ಹೇಳಿದ್ದಾರೆ. ವಿವಿಧ ದೇಶಗಳ ಆಮದು ಸುಂಕಗಳ ಮೇಲೆ ಸುಂಕ ಹೆಚ್ಚಿನ ನಿರ್ಧಾರದ ಕುರಿತು ಜಪಾನ್‌ನ ಹಣಕಾಸು ಸಚಿವ ಕಾಟುನೊಬೊ ಕಾಟು, ‘ಅಮೆರಿಕದ ಇಂಥ ಕ್ರಮಗಳಿಂದ ವಿಶ್ವದ ಆರ್ಥಿಕತೆಯ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದರ ಕುರಿತು ನಮಗೆ ತೀವ್ರ ಕಳವಳವಿದೆ’ ಎಂದಿದ್ದಾರೆ.
ಫೆಂಟನಲ್ ಮಾದಕವಸ್ತುವಿನ ಸಮಸ್ಯೆ ಅಮೆರಿಕದ್ದು. ಮಾದಕವಸ್ತು ಜಾಲ ತಡೆಗೆ ಸಂಬಂಧಿಸಿ ಅಮೆರಿಕದೊಂದಿಗೆ ಸೇರಿಕೊಂಡು ಹಲವು ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಇದರಿಂದ ಹಲವು ಉತ್ತಮ ಫಲಿತಾಂಶವೂ ದೊರಕಿದೆಚೀನಾ ವಿದೇಶಾಂಗ ಸಚಿವಾಲಯ
ನನ್ನ ಈ ನಿರ್ಧಾರದಿಂದ ಅಮೆರಿಕ ಜನರಿಗೆ ಆರ್ಥಿಕ ನಷ್ಟವಾಗಬಹುದು. ಆದರೆ ದೇಶದ ಹಿತಕ್ಕಾಗಿ ನಾವು ಈ ನಷ್ಟವನ್ನು ಅನುಭವಿಸಲೇ ಬೇಕು. ನಾವು ಅಮೆರಿಕವನ್ನು ಮತ್ತೊಮ್ಮೆ ಗ್ರೇಟ್ ಮಾಡೋಣಡೊನಾಲ್ಟ್ ಟ್ರಂಪ್ ಅಮೆರಿಕ ಅಧ್ಯಕ್ಷ
‘ಅಮೆರಿಕದಲ್ಲಿ ಉದ್ಯೋಗ ನಷ್ಟವಾಗಲಿದೆ’
‘ಸುಂಕ ವಿಧಿಸಲು ನಮಗೆ ಇಷ್ಟವಿಲ್ಲ. ಆದರೆ ಹೀಗೆ ಮಾಡದೆ ಬೇರೆ ವಿಧಿಯಿಲ್ಲ. ಈ ನಿರ್ಧಾರವು ಕೆನಡಾ ಜನರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ನಿಜ. ಇದಕ್ಕೂ ಮಿಗಿಲಾಗಿ ಇದರಿಂದ ಅಮೆರಿಕ ಜನರ ಮೇಲೆಯೇ ಹೆಚ್ಚು ಪರಿಣಾಮ ಉಂಟಾಗಲಿದೆ. ಅಮೆರಿಕದ ವಾಹನ ಜೋಡಣಾ ಘಟಕಗಳು ಹಾಗೂ ತಯಾರಿಕಾ ಘಟಕಗಳು ಮುಚ್ಚಲಿವೆ. ಇದರಿಂದ ಉದ್ಯೋಗ ನಷ್ಟ ಸಂಭವಿಸಲಿದೆ’ ಎಂದು ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೊ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ನಮ್ಮ ಮೆಕ್ಸಿಕೊ ಮತ್ತು ಅಮೆರಿಕದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಇದೆ. ಈಗ ನಮ್ಮ ಮಧ್ಯೆಯೇ ವ್ಯಾಪಾರ ಯುದ್ಧ ಆರಂಭಿಸಿದ್ದೇವೆ. ಇದರಿಂದ ಉತ್ತರ ಅಮೆರಿಕ ಭಾಗಕ್ಕೆ ವಸ್ತುಗಳ ಹರಿವು ಕಡಿತವಾಗಲಿದೆ. ಜೊತೆಗೆ ಕೆನಡಾ ಮೂಲಕ ಅಕ್ರಮ ವಲಸಿಗರು ಮತ್ತು ಫೆಂಟನೆಲ್ ಅಮೆರಿಕವನ್ನು ಪ್ರವೇಶಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಆದರೆ ನಮ್ಮ ನೆಲದಿಂದ ಕೇವಲ ಶೇ 1ರಷ್ಟು ಫೆಂಟನೆಲ್ ಅಮೆರಿಕ ತಲುಪುತ್ತಿದೆ. ಕೆಲವೇ ಸಂಖ್ಯೆಯ ಅಕ್ರಮ ವಲಸಿಗರು ಅಲ್ಲಿಗೆ ಹೋಗುತ್ತಿದ್ದಾರಷ್ಟೆ’ ಎಂದರು.
‘ಅಮೆರಿಕಕ್ಕೆ ಕಾದಿದೆ ಸಂಕಷ್ಟ’
ಕೆನಡಾ ಮೆಕ್ಸಿಕೊ ಮತ್ತು ಚೀನಾ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಅಮೆರಿಕವು ಆಮದು ಮಾಡಿಕೊಳ್ಳುತ್ತದೆ. ಈಗ ಈ ದೇಶಗಳ ಮೇಲೆ ಅಮೆರಿಕ ಹೆಚ್ಚಿನ ಆಮದು ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಕೆನಡಾ ಈಗಾಗಲೇ ಅಮೆರಿಕ ಮೇಲೆ ಆಮದು ಸುಂಕ ವಿಧಿಸಿದೆ. ಇದರಿಂದ ಅಮೆರಿಕಕ್ಕೆ ಹೆಚ್ಚಿನ ನಷ್ಟವಾಗಲಿದೆ. ಒಂದು ವೇಳೆ ಚೀನಾ ಹಾಗೂ ಮೆಕ್ಸಿಕೊ ದೇಶಗಳು ಕೂಡ ಕೆನಡಾ ದಾರಿಯನ್ನೇ ಹಿಡಿದರೆ ಅಮೆರಿಕಕ್ಕೆ ಸಂಕಷ್ಟ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ‘ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಮೆರಿಕವು ಶೇ 0.7ರಷ್ಟು ಹಣದುಬ್ಬರವನ್ನು ಎದುರಿಸಲಿದೆ. ಜನರು ಖರ್ಚು ಕಡಿಮೆ ಮಾಡಲಿದ್ದಾರೆ ಮತ್ತು ಹೂಡಿಕೆ ಪ್ರಮಾಣ ಕುಸಿಯಲಿದೆ’ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ‘ವ್ಯಾಪಾರ ನೀತಿಗಳಲ್ಲಿನ ಇಂಥ ಅನಿಶ್ಚಿತತೆಯು ಮಾರುಕಟ್ಟೆಯಲ್ಲಿ ನಿರಂತರ ಬದಲಾವಣೆಗಳನ್ನು ತಂದೊಡ್ಡಲಿದೆ. ಇಂಥ ಪರಿಸ್ಥಿತಿಯು ಖಾಸಗಿ ವಲಯಕ್ಕೆ ತೀವ್ರ ಪೆಟ್ಟು ನೀಡಲಿದೆ. ಟ್ರಂಪ್ ಅವರು ತಮ್ಮ ಪ್ರಚಾರದುದ್ದಕ್ಕೂ ವ್ಯಾಪರ ಸ್ನೇಹಿ ಆಡಳಿತ ನೀಡುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಅವರು ಈ ಕ್ರಮಗಳು ವ್ಯಾಪಾರ ಸ್ನೇಹಿಯಾಗಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.