ADVERTISEMENT

ಗ್ರೀನ್‌ ಕಾರ್ಡ್‌ ಬದಲು ‘ಬಿಲ್ಡ್‌ ಅಮೆರಿಕ ವೀಸಾ’

ನೂತನ ವಲಸೆ ನೀತಿ ಪ್ರಕಟಿಸಿದ ಟ್ರಂಪ್‌: ಭಾರತೀಯ ವೃತ್ತಿಪರರಿಗೆ ಹೆಚ್ಚು ಅನುಕೂಲವಾಗುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 19:02 IST
Last Updated 17 ಮೇ 2019, 19:02 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌ : ನೂತನ ವಲಸೆ ನೀತಿ ಪ್ರಕಟಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸದ್ಯ ಜಾರಿಯಲ್ಲಿರುವ ಗ್ರೀನ್‌ ಕಾರ್ಡ್‌ ವ್ಯವಸ್ಥೆಯನ್ನು ಬದಲಾಯಿಸುವುದಾಗಿ ತಿಳಿಸಿದ್ದಾರೆ.

ಗ್ರೀನ್‌ಕಾರ್ಡ್‌ ಬದಲು ’ಬಿಲ್ಡ್‌ ಅಮೆರಿಕ ವೀಸಾ‘ ಎನ್ನುವ ಹೆಸರಿನಲ್ಲಿ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ಘೋಷಿಸಿದ್ದಾರೆ.

ಅರ್ಹತೆ, ಕೌಶಲ ಮತ್ತು ಅಂಕಗಳ ಆಧಾರಿತ ಹೊಸ ವಲಸೆ ನೀತಿ ಅಡಿಯಲ್ಲಿ ಅತ್ಯುನ್ನತ ಕೌಶಲ ಹೊಂದಿರುವವರಿಗೆ ವೀಸಾ ನೀಡುವುದನ್ನು ಶೇಕಡ 12ರಿಂದ ಶೇಕಡ 57ಕ್ಕೆ ಹೆಚ್ಚಿಸಲಾಗುವುದು ಎಂದು ಟ್ರಂಪ್‌ ಘೋಷಿಸಿದ್ದಾರೆ.

ADVERTISEMENT

ಹೊಸ ನೀತಿಯಿಂದ ಭಾರತದ ಸಾವಿರಾರು ವೃತ್ತಿಪರರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಇವರಲ್ಲಿ ಹಲವರು ಗ್ರೀನ್‌ಕಾರ್ಡ್‌ಗೆ ದಶಕಗಳಿಂದ ಕಾಯುತ್ತಿದ್ದಾರೆ.

ಪ್ರತಿ ವರ್ಷ 11 ಲಕ್ಷ ಗ್ರೀನ್‌ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಇದರಿಂದ, ವಿದೇಶಿಯರಿಗೆ ಬದುಕಿರುವವರೆಗೂ ಅಮೆರಿಕದಲ್ಲಿ ವಾಸಿಸಲು ಮತ್ತು ಐದು ವರ್ಷಗಳಲ್ಲಿ ಪೌರತ್ವ ಪಡೆಯಲು ಅವಕಾಶ ದೊರೆಯುತ್ತದೆ. ಪ್ರಸ್ತುತ ಬಹುತೇಕ ಗ್ರೀನ್‌ ಕಾರ್ಡ್‌ಗಳನ್ನು ಕುಟುಂಬದ ಸಂಬಂಧಿಕರಿಗೆ ನೀಡಲಾಗುತ್ತಿದ್ದು, ವೃತ್ತಿಪರರಿಗೆ ಮತ್ತು ಅತ್ಯುನ್ನತ ಕೌಶಲ ಹೊಂದಿರುವವರಿಗೆ ಕಡಿಮೆ ಸಂಖ್ಯೆಯಲ್ಲಿ ದೊರೆಯುತ್ತಿವೆ.

'ಅಮೆರಿಕಗೆ ಬರುವವರಿಗೆ ಸರಳವಾದ ಮಾನದಂಡಗಳನ್ನು ನಿಗದಿಪಡಿಸುತ್ತೇವೆ. ಅರ್ಹತೆ ಮತ್ತು ಕೌಶಲವೇ ಮುಖ್ಯವಾಗಿರುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಜನಿಸಿರುವ ವ್ಯಕ್ತಿ ಇರಬಹುದು. ಆತನಿಗೆ ಅಮೆರಿಕದ ಪೌರತ್ವ ಬೇಕಾಗಿದ್ದರೆ ಮಾನದಂಡಗಳನ್ನು ಪೂರೈಸಿದರೆ ಸಾಕು. ಇದು ಅತ್ಯಂತ ಸ್ಪಷ್ಟವಾದ ನೀತಿಯಾಗಿದೆ‘ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದಾರೆ.

‘ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಂಕಗಳ ಆಧಾರಿತ ಆಯ್ಕೆ ವ್ಯವಸ್ಥೆ ಇದೆ. ದುಡಿಯುವ ಯುವಕರಿಗೆ ಹಾಗೂ ಹೆಚ್ಚು ಕೌಶಲ ಹೊಂದಿರುವವರಿಗೆ ಹೆಚ್ಚು ಅಂಕಗಳು ಸಿಗಬಹುದು‘ ಎಂದು ಟ್ರಂಪ್‌ ವಿವರಿಸಿದ್ದಾರೆ.

’ಇದುವರೆಗೆ ಈ ರೀತಿಯ ವ್ಯವಸ್ಥೆಯೇ ಇಲ್ಲದ ಕಾರಣ ಹೊಸ ಕಂಪನಿಗಳನ್ನು ಆರಂಭಿಸಲು ಆಸಕ್ತಿ ತೋರುತ್ತಿದ್ದವರನ್ನು ಅಮೆರಿಕ ಕಳೆದುಕೊಳ್ಳುತ್ತಿತ್ತು. ಹಲವರು ಅಮೆರಿಕ ತೊರೆದು ತಮ್ಮ ತವರು ರಾಷ್ಟ್ರಗಳಿಗೆ ತೆರಳಿದ್ದಾರೆ. ಇನ್ನು ಮುಂದೆ, ಇಂತಹ ಪರಿಸ್ಥಿತಿ ಇರುವುದಿಲ್ಲ. ಅಮೆರಿಕದಲ್ಲಿ ತಮಗೆ ಬೇಕಾದ ಸ್ಥಳದಲ್ಲೇ ಕಂಪನಿಗಳನ್ನು ಆರಂಭಿಸಬಹುದು‘ ಎಂದು ತಿಳಿಸಿದ್ದಾರೆ.ಆದರೆ, ಹೊಸ ನೀತಿಗೆ ಹಲವು ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ನೀತಿ ದೂರದೃಷ್ಟಿ ಹೊಂದಿಲ್ಲ ಎಂದು ಸೆನೆಟರ್‌ ಕಮಲಾ ಹ್ಯಾರಿಸ್‌
ಅಭಿಪ್ರಾಯಪಟ್ಟಿದ್ದಾರೆ.

ವಲಸೆಗಾರರಿಗೆ ಪರೀಕ್ಷೆ!

ಭವಿಷ್ಯದಲ್ಲಿ ವಲಸೆಗಾರರು ಪ್ರವೇಶಕ್ಕೆ ಮುನ್ನ ಇಂಗ್ಲಿಷ್‌ ಕಲಿಯಲೇಬೇಕು ಮತ್ತು ಪೌರತ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.

‘ಎಚ್‌–1ಬಿ’ ನಿರಾಕರಿಸಿದ್ದಕ್ಕೆ ಮೊಕದ್ದಮೆ

ಭಾರತದ ವೃತ್ತಿಪರರೊಬ್ಬರಿಗೆ ಎಚ್‌–1ಬಿ ವೀಸಾ ನೀಡಲು ನಿರಾಕರಿಸಿರುವುದನ್ನು ಪ್ರಶ್ನಿಸಿ ಮಾಹಿತಿ ತಂತ್ರಜ್ಞಾನ ಕಂಪನಿ ಅಮೆರಿಕ ಸರ್ಕಾರದ ವಿರುದ್ಧ ಮೊಕದ್ದಮೆ ದಾಖಲಿಸಿದೆ.

‘ಕ್ಸ್ಟೆರ‍್ರಾ ಸೊಲ್ಯೂಷನ್ಸ್‌‘ ಕಂಪನಿಯು ಪ್ರಹಾರ್ಷ್‌ ಚಂದ್ರ ಸಾಯಿ ವೆಂಕಟ ಅನಿಶೆಟ್ಟಿ ಎನ್ನುವವರನ್ನು ಬ್ಯುಸಿನೆಸ್‌ ಸಿಸ್ಟ್ಂ ಅನಾಲಿಸ್ಟ್‌ ಎಂದು ನೇಮಿಸಿಕೊಂಡಿತ್ತು. ಅನಿಸೆಟ್ಟಿ ಪರ ಕಂಪನಿ ಸಲ್ಲಿಸಿದ್ದ ಎಚ್‌–1ಬಿ ವೀಸಾ ಅರ್ಜಿಯನ್ನು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ವಿಭಾಗ ತಿರಸ್ಕರಿಸಿತ್ತು.

ಅನಿಸೆಟ್ಟಿ ಅವರಿಗೆ ನೀಡಿರುವ ಉದ್ಯೋಗವು ವಿಶೇಷ ವೃತ್ತಿಗೆ ಅರ್ಹತೆ ಪಡೆದಿಲ್ಲ ಎನ್ನುವ ಕಾರಣ ನೀಡಲಾಗಿತ್ತು.

ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಪದವಿ ಪಡೆದಿರುವ ಅನಿಸೆಟ್ಟಿ, ಮಾಹಿತಿ ತಂತ್ರಜ್ಞಾನದಲ್ಲಿ ಎಂ.ಎಸ್ಸಿ ಮತ್ತು ಯೂನಿವರ್ಸಿಟಿ ಆಫ್‌ ಟೆಕ್ಸಾಸ್‌ನಲ್ಲಿ ಮ್ಯಾನೆಜ್‌ಮೆಂಟ್‌ ಪದವಿಯನ್ನೂ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.