ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಚೀನಾ, ಭಾರತ ಮತ್ತು ಬ್ರೆಜಿಲ್ ಅನ್ನು ಹೆಚ್ಚು ಸುಂಕ ವಿಧಿಸುತ್ತಿರುವ ದೇಶಗಳು ಎಂದು ಹೆಸರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಕ್ಕೆ ‘ಹಾನಿ’ ಮಾಡುವ ದೇಶಗಳ ಮೇಲೆ ಅಧಿಕ ಸುಂಕವನ್ನು ವಿಧಿಸುತ್ತೇವೆ ಎಂದು ಹೇಳಿದ್ದಾರೆ.
‘ಅಮೆರಿಕಕ್ಕೆ ಹಾನಿ ಮಾಡುವ ಹೊರರಾಷ್ಟ್ರಗಳು ಮತ್ತು ಹೊರಗಿನ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತೇವೆ. ನಮಗೆ ಅದು ಹಾನಿ ಎನಿಸುತ್ತದೆ. ಆದರೆ, ಮೂಲಭೂತವಾಗಿ ಅವರು ಅವರ ದೇಶಗಳಿಗೆ ಒಳಿತನ್ನು ಮಾಡುವ ಉದ್ದೇಶ ಹೊಂದಿರುತ್ತಾರೆ’ ಎಂದು ಫ್ಲೋರಿಡಾದಲ್ಲಿ ರಿಪಬ್ಲಿಕನ್ನರು ಉದ್ದೇಶಿಸಿ ಹೇಳಿದ್ದಾರೆ.
'ಇತರೆ ದೇಶಗಳು ಏನು ಮಾಡುತ್ತಿವೆ ಎಂಬುದನ್ನು ನೋಡಿ. ಚೀನಾ ಪ್ರಚಂಡ ತೆರಿಗೆ ಹೇರುತ್ತಿದೆ. ಭಾರತ ಮತ್ತು ಬ್ರೆಜಿಲ್ ಸೇರಿದಂತೆ ಹಲವು ದೇಶಗಳು ಇದೇ ಹಾದಿಯಲ್ಲಿವೆ. ಆದ್ದರಿಂದ, ಇನ್ನುಮುಂದೆ ನಾವು ಹಾಗೆ ಆಗಲು ಬಿಡುವುದಿಲ್ಲ. ಏಕೆಂದರೆ, ನಮಗೆ ಅಮೆರಿಕವೇ ಮೊದಲು’ ಎಂದು ಹೇಳಿದ್ದಾರೆ.
‘ನಮ್ಮ ಬೊಕ್ಕಸಕ್ಕೆ ಹಣ ಬರಲಿದೆ ಮತ್ತು ಅಮೆರಿಕವು ಮತ್ತೆ ಶ್ರೀಮಂತವಾಗಲು ಬೇಕಾದ ಅತ್ಯಂತ ನ್ಯಾಯಯುತ ವ್ಯವಸ್ಥೆಯನ್ನು ನಾವು ಸ್ಥಾಪಿಸುತ್ತೇವೆ. ಅದು ಬಹಳ ಬೇಗ’ ಎಂದಿದ್ದಾರೆ.
‘ಹಿಂದೆಂದಿಗಿಂತಲೂ ಶ್ರೀಮಂತ ಮತ್ತು ಹೆಚ್ಚು ಶಕ್ತಿಯುತ ವ್ಯವಸ್ಥೆಗೆ ಅಮೆರಿಕ ಮರಳಲು ಇದು ಸುಸಮಯವಾಗಿದೆ’ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ.
ಕಳೆದ ವಾರ ತಮ್ಮ ಅಧಿಕಾರ ಸ್ವೀಕಾರ ಸಮಾರಂಭ ಉಲ್ಲೇಖಿಸಿ ಮಾತನಾಡಿದ ಅವರು, ವಿದೇಶಿ ರಾಷ್ಟ್ರಗಳನ್ನು ಶ್ರೀಮಂತಗೊಳಿಸಲು ನಮ್ಮ ನಾಗರಿಕರಿಗೆ ತೆರಿಗೆ ವಿಧಿಸುವ ಬದಲು,ನಮ್ಮ ನಾಗರಿಕರನ್ನು ಶ್ರೀಮಂತಗೊಳಿಸಲು ವಿದೇಶಿ ರಾಷ್ಟ್ರಗಳಿಗೆ ತೆರಿಗೆ ವಿಧಿಸಬೇಕು. ‘ಅಮೆರಿಕ ಫಸ್ಟ್’ಆರ್ಥಿಕ ಮಾದರಿ ಅಡಿಯಲ್ಲಿ ಇತರೆ ದೇಶಗಳ ಮೇಲಿನ ಸುಂಕಗಳು ಹೆಚ್ಚಾಗುತ್ತಿದ್ದಂತೆ ಅಮೆರಿಕದ ಕಾರ್ಮಿಕರು ಮತ್ತು ವ್ಯವಹಾರಗಳ ಮೇಲಿನ ತೆರಿಗೆಗಳು ಕಡಿಮೆಯಾಗುತ್ತವೆ. ಬೃಹತ್ ಸಂಖ್ಯೆಯ ಉದ್ಯೋಗಗಳ ಸೃಷ್ಟಿ ಮತ್ತು ಕಾರ್ಖಾನೆಗಳು ಆರಂಭವಾಗುತ್ತವೆ’ಎಂದು ಅವರು ಹೇಳಿದ್ದಾರೆ.
ಭಾರತವನ್ನು ಒಳಗೊಂಡ ಬ್ರಿಕ್ಸ್ ದೇಶಗಳಿಗೆ ಶೇಕಡ 100ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಹಿಂದೆಯೇ ಹೇಳಿದ್ದಾರೆ.
ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶವಿದ್ದರೆ ಅಮೆರಿಕಕ್ಕೆ ಬಂದು ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಎಂದು ಕಂಪನಿಗಳಿಗೆ ಅವರು ಕರೆ ನೀಡಿದ್ದಾರೆ.
ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ, ವಿಶೇಷವಾಗಿ ಔಷಧಿ, ಸೆಮಿಕಂಡಕ್ಟರ್‌ಗಳು ಮತ್ತು ಉಕ್ಕಿನಂತಹ ಕೈಗಾರಿಕೆಗಳನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ತಮ್ಮ ಆಡಳಿತವು ಉಕ್ಕು, ಅಲ್ಯೂಮಿನಿಯಂ, ತಾಮ್ರ ಸೇರಿದಂತೆ ನಮ್ಮ ಮಿಲಿಟರಿಗೆ ಅಗತ್ಯವಿರುವ ಇತರೆ ವಸ್ತುಗಳ ಮೇಲೆ ಸುಂಕವನ್ನು ವಿಧಿಸುತ್ತಿದೆ ಎಂದ ಟ್ರಂಪ್, ‘ನಾವು ಉತ್ಪಾದಕರನ್ನು ನಮ್ಮ ದೇಶಕ್ಕೆ ಮರಳಿ ಕರೆತರಬೇಕು. ದಿನಕ್ಕೊಂದು ಹಡಗು ನಿರ್ಮಿಸುವ ಕಾಲವೊಂದಿತ್ತು, ಈಗ ದಿನಕ್ಕೊಂದು ಹಡಗು ತಯಾರಿಸಲು ಸಾಧ್ಯವಿಲ್ಲ. ನಾವು ಏನು ಮಾಡುತ್ತಿದ್ದೇವೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನಮ್ಮಲ್ಲಿ ಸ್ಥಾಪನೆಯಾಗಿದ್ದ ಹಲವು ಉದ್ಯಮಗಳು ಇತರೆ ದೇಶಗಳಿಗೆ ಹೋಗಿವೆ’ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.