ADVERTISEMENT

ತಕ್ಷಣ ಒಪ್ಪಂದ ಮಾಡಿಕೊಳ್ಳಿ: ಕ್ಯೂಬಾಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 16:16 IST
Last Updated 11 ಜನವರಿ 2026, 16:16 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್‌/ ವೆಸ್ಟ್ ಪಾಮ್‌ ಬೀಚ್‌, ಅಮೆರಿಕ: ‘ಅಮೆರಿಕದ ಜತೆ ತಕ್ಷಣ ಒಪ್ಪಂದ ಮಾಡಿಕೊಳ್ಳದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾದೀತು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾನುವಾರ ಕ್ಯೂಬಾಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಇನ್ನಷ್ಟು ತಡವಾಗುವ ಮುನ್ನ ಒಪ್ಪಂದ ಮಾಡಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದು ‘ಟ್ರುಥ್‌ ಸೋಷಿಯಲ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ವೆನೆಜುವೆಲಾದಲ್ಲಿ ಸೇನಾ ಕಾರ್ಯಾಚರಣೆ ಕೈಗೊಂಡ ಒಂದು ವಾರದ ಬಳಿಕ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

‘ಕ್ಯೂಬಾಗೆ ವೆನೆಜುವೆಲಾದಿಂದ ತೈಲ ಅಥವಾ ಹಣ ಹೋಗುವುದಿಲ್ಲ. ವೆನೆಜುವೆಲಾದಿಂದ ಹರಿದು ಬರುತ್ತಿದ್ದ ಅಪಾರ ಪ್ರಮಾಣದ ತೈಲ ಮತ್ತು ಹಣದಿಂದ ಕ್ಯೂಬಾ ಹಲವು ವರ್ಷಗಳ ಕಾಲ ಬದುಕಿದೆ. ಅದಕ್ಕೆ ಪ್ರತಿಯಾಗಿ ವೆನೆಜುವೆಲಾದ ಕೊನೆಯ ಇಬ್ಬರು ಸರ್ವಾಧಿಕಾರಿಗಳಿಗೆ ಕ್ಯೂಬಾ ಭದ್ರತೆ ನೀಡಿತು. ಆದರೆ, ಇನ್ನು ಮುಂದೆ ಅದು ನಡೆಯದು’ ಎಂದಿದ್ದಾರೆ. 

ADVERTISEMENT

ತೈಲ ಕಂಪನಿಗಳಿಗೆ ನ್ಯಾಯಾಂಗದಿಂದ ರಕ್ಷಣೆ: ವೆನೆಜುವೆಲಾದಲ್ಲಿ ಹೂಡಿಕೆ ಮಾಡಲಿರುವ ತೈಲ ಕಂಪನಿಗಳಿಗೆ ನ್ಯಾಯಾಲಯದ ವಿಚಾರಣೆಯಿಂದ ರಕ್ಷಣೆ ಒದಗಿಸುವ ಕಾರ್ಯಾಕಾರಿ ಆದೇಶಕ್ಕೆ ಟ್ರಂಪ್ ಶನಿವಾರ ಸಹಿ ಹಾಕಿದ್ದಾರೆ.

‘ವೆನೆಜುವೆಲಾದಲ್ಲಿ ಈಗಿನ ಸ್ಥಿತಿಯಲ್ಲಿ ವಾಣಿಜ್ಯಾತ್ಮಕ ಹಾಗೂ ಮೂಲಸೌಕರ್ಯದ ಚೌಕಟ್ಟು ರೂಪಿಸಿದರೆ, ಹೂಡಿಕೆ ಮಾಡಲು ಅಸಾಧ್ಯವಾದ ಸ್ಥಿತಿಯಿದೆ’ ಎಂದು ಅಮೆರಿಕದ ಅತಿ ದೊಡ್ಡ ತೈಲ ಕಂಪನಿಯಾದ ‘ಎಕ್ಸಾನ್‌ಮೊಬಿಲ್‌’ನ ಸಿಇಒ ಡರೆನ್‌ ವುಡ್ಸ್‌ ಅವರು ಶುಕ್ರವಾರ ನಡೆದ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದರು.

ಈ ಸಮಸ್ಯೆಗೆ ಪ‍ರಿಹಾರ ಒದಗಿಸುವ ಭರವಸೆ ನೀಡಿದ್ದ ಡೊನಾಲ್ಡ್‌ ಟ್ರಂಪ್‌, ಯಾವುದೇ ಒಪ್ಪಂದಗಳಿದ್ದರೂ ವೆನೆಜುವೆಲಾ ಸರ್ಕಾರದ ಬದಲಿಗೆ ಅಮೆರಿಕದ ಜೊತೆಗೆ ನೇರವಾಗಿ ವಹಿವಾಟು ನಡೆಸುವ ಆದೇಶ ಜಾರಿ ಮಾಡಲಾಗುವುದು. ನ್ಯಾಯಾಲಯದ ವಿಚಾರಣೆಯಿಂದ ರಕ್ಷಣೆ ಒದಗಿಸಲಾಗುವುದು’ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ, ಟ್ರಂಪ್‌ ಅವರ ಈ ಆದೇಶ ಹೊರಬಿದ್ದಿದೆ. 

ತೈಲ ನಿಕ್ಷೇಪ: ಹೂಡಿಕೆದಾರರಿಗೆ ರಕ್ಷಣೆ– ಟ್ರಂಪ್‌

ವಾಷಿಂಗ್ಟನ್‌: ವೆನೆಜುವೆಲಾದಲ್ಲಿನ ತೈಲ ನಿಕ್ಷೇಪಗಳ ಮೇಲೆ ಹೂಡಿಕೆ ಮಾಡುವವರಿಗೆ ಸಂಪೂರ್ಣ ರಕ್ಷಣೆ ನೀಡಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರವಸೆ ನೀಡಿದ್ದಾರೆ.  ವಿವಿಧ ತೈಲ ಕಂಪನಿಗಳ ಕಾರ್ಯನಿರ್ವಾಹಕರು ಪ್ರತಿನಿಧಿಗಳ ಜತೆ ಶುಕ್ರವಾರ ಸಭೆ ನಡೆಸಿದ ಟ್ರಂಪ್‌  ವೆನೆಜುವೆಲಾದಲ್ಲಿನ ತೈಲ ನಿಕ್ಷೇಪಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಅಮೆರಿಕ ಮುಂದಾಗಿದೆ. ಇದಕ್ಕಾಗಿ ಶ್ವೇತಭವನವು ಸುಮಾರು 100 ಶತಕೋಟಿ ಡಾಲರ್‌ (₹902 ಕೋಟಿ) ಹೂಡಿಕೆ ಸಂಗ್ರಹಿಸುವ ಹಾದಿಯಲ್ಲಿದೆ ಎಂದು ತಿಳಿಸಿದ್ದಾರೆ.

ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಅವರನ್ನು ಅಮೆರಿಕ ಸೇನೆ ಸೆರೆಹಹಿಡಿದ ಬಳಿಕ ಅಮೆರಿಕ ವೆನೆಜುವೆಲಾದ ಕೆಲ ತೈಲ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿದೆ. ವೆನೆಜುವೆಲಾದಲ್ಲಿನ ತೈಲ ನಿಕ್ಷೇಪಗಳನ್ನು ತನ್ನ ಹತೋಟಿಗೆ ತೆಗೆದುಕೊಂಡು ವಿಶ್ವದಾದ್ಯಂತ ತೈಲ ಮಾರಾಟವನ್ನು ಅನಿರ್ದಿಷ್ಟವಾಗಿ ನಿಯಂತ್ರಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.   ‘ವೆನೆಜುವೆಲಾದಲ್ಲಿ ಹಣ ಹೂಡುವುದು ಸರ್ಕಾರವಲ್ಲ. ಬದಲಿಗೆ ನಮ್ಮ ದೈತ್ಯ ತೈಲ ಕಂಪನಿಗಳು. ಅಲ್ಲಿ ಈ ಕಂಪನಿಗಳು ಕನಿಷ್ಠ 100 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲಿವೆ. ಅವರಿಗೆ ಸರ್ಕಾರದಿಂದ ಹಣದ ಅಗತ್ಯವಿಲ್ಲ. ಬದಲಿಗೆ ಅವರು ನಮ್ಮಿಂದ ರಕ್ಷಣೆ ನಿರೀಕ್ಷೆ ಮಾಡುತ್ತಾರೆ. ಅದನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.