
ವಾಷಿಂಗ್ಟನ್: ತನ್ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಸಂಬಂಧಿಸಿ ಇರಾನ್ ಕೂಡಲೇ ಸೂಕ್ತ ಒಪ್ಪಂದಕ್ಕೆ ಬರಬೇಕು. ತಪ್ಪಿದಲ್ಲಿ ಭಾಂಬ್ ದಾಳಿಯೂ ಸೇರಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಎಚ್ಚರಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕದಿಂದ ಸೇನೆ ಜಮಾವಣೆ ಹೆಚ್ಚುತ್ತಿರುವ ನಡುವೆಯೇ ಟ್ರಂಪ್ ಈ ಮಾತು ಹೇಳಿದ್ದಾರೆ. ಅಲ್ಲದೇ, ಇದೇ ವಿಚಾರವಾಗಿ ಇರಾನ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಒಪ್ಪಂದ ಮಾಡಿಕೊಳ್ಳಬೇಕು ಎಂದಿರುವ ಟ್ರಂಪ್, ಇದಕ್ಕೆ 10 ದಿನಗಳ ಗಡುವು ನೀಡುವುದಾಗಿಯೂ ಹೇಳಿದ್ದಾರೆ. ಗಡುವಿನ ಬಗ್ಗೆ ಹೆಚ್ಚು ವಿವರಗಳನ್ನು ಅವರು ನೀಡಿಲ್ಲ.
‘ಶಾಂತಿ ಮಂಡಳಿ’ಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ‘ಇರಾನ್ ಜೊತೆಗಿನ ಮಾತುಕತೆಗಳು ಸದ್ಯ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿವೆ. ಆದರೆ, ಇರಾನ್ ಸೂಕ್ತ ಒಪ್ಪಂದಕ್ಕೆ ಬರುವುದು ಮುಖ್ಯ’ ಎಂದರು.
ಬೆಲೆ ಏರಿಕೆ: ಟ್ರಂಪ್ ಅವರು ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ಬೆದರಿಕೆ ಒಡ್ಡಿದ ಬೆನ್ನಲ್ಲೇ, ತೈಲ ಬೆಲೆಗಳು ಏರುಮುಖಿಯಾಗಿವೆ.
ಇನ್ನೊಂದೆಡೆ, ಒಮಾನ್ ಕೊಲ್ಲಿಯಲ್ಲಿ ಇರಾನ್ ನೌಕಾಪಡೆಯು ಸಮರಾಭ್ಯಾಸ ಆರಂಭಿಸಲಿದ್ದು, ರಷ್ಯಾದ ಯುದ್ಧನೌಕೆ ಈ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.