ADVERTISEMENT

ಟರ್ಕಿ, ಸಿರಿಯಾದಲ್ಲಿ ದಶಕದ ಭೀಕರ ಭೂಕಂಪ: 11,200ಕ್ಕೂ ಅಧಿಕ ಸಾವು

ಟರ್ಕಿ, ಸಿರಿಯಾದಲ್ಲಿ ಸಾವು–ನೋವಿನ ಆಕ್ರಂದನ * ಒಬ್ಬ ಭಾರತೀಯ ನಾಪತ್ತೆ

ಏಜೆನ್ಸೀಸ್
Published 8 ಫೆಬ್ರುವರಿ 2023, 16:07 IST
Last Updated 8 ಫೆಬ್ರುವರಿ 2023, 16:07 IST
   

ಗಾಝಿಯಾನ್‌ಟೆಪ್‌, ಅಂಕಾರಾ (ಟರ್ಕಿ): ದಶಕದಲ್ಲೇ ಅತ್ಯಂತ ಭೀಕರವೆನಿಸಿದ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ಮೃತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈ ದುರಂತದಲ್ಲಿ ಮಡಿದವರ ಸಂಖ್ಯೆ ಬುಧವಾರ 11,236ಕ್ಕೆ ತಲುಪಿದೆ.

ಕಟ್ಟಡಗಳ ಅವಶೇಷಗಳಡಿ ಜೀವಂತ ಸಮಾಧಿಯಾದವರ ಶವಗಳನ್ನು ಹೊರತೆಗೆಯುವ ಕೆಲಸ ಹಗಲು– ರಾತ್ರಿ ಮುಂದುವರಿದಿದೆ. ಬದುಕುಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯವನ್ನು ವಿಪತ್ತು ಸ್ಪಂದನಾ ಪಡೆಗಳ ಸಿಬ್ಬಂದಿ ಕೊರೆವ ಚಳಿ ಲೆಕ್ಕಿಸದೇ ನಡೆಸುತ್ತಿದ್ದಾರೆ.

ಟರ್ಕಿಯಲ್ಲಿ ಒಬ್ಬ ಭಾರತೀಯ ಪ್ರಜೆ ಕಾಣೆಯಾಗಿದ್ದು, ಇತರ 10 ಭಾರತೀಯರು ಹಾನಿಗೊಳಗಾದ ಪ್ರದೇಶದಲ್ಲಿ ಸಿಲುಕಿದ್ದಾರೆ. ಆದರೆ, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾರತ ಸರ್ಕಾರ ಹೇಳಿದೆ.

ADVERTISEMENT

‘ಕಾಣೆಯಾದ ವ್ಯಕ್ತಿಯ ಕುಟುಂಬದ ಜತೆ ಕೇಂದ್ರದ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರಿಗಾಗಿ ಸೇನೆಯ ನಾಲ್ಕು ವಿಮಾನಗಳಲ್ಲಿ ವೈದ್ಯಕೀಯ ನೆರವು, ಔಷಧ, ರಕ್ಷಣಾ ಸಿಬ್ಬಂದಿ ತಂಡ ಹಾಗೂ ಪರಿಹಾರ ಸಾಮಗ್ರಿಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಟರ್ಕಿಗೆ ಕಳುಹಿಸಿದೆ’ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ಹೇಳಿದ್ದಾರೆ.

ಸೋಮವಾರ ನಸುಕಿನಲ್ಲಿ ಕಂಪನ ಸಂಭವಿಸಿತ್ತು. ರಿಕ್ಟರ್‌ ಮಾಪಕದಲ್ಲಿ 7.8 ತೀವ್ರತೆ ಇತ್ತು. ಇದರಿಂದ ಟರ್ಕಿಯಲ್ಲಿ 8,574 ಜನರು ಮತ್ತು ಸಿರಿಯಾದಲ್ಲಿ 2,662 ಜನರು ಈವರೆಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಂಪನದ ಕೇಂದ್ರಬಿಂದುವಿದ್ದ ಪಟ್ಟಣ ಪಝಾರಿಕ್‌ ಮತ್ತು ತೀವ್ರ ಹಾನಿಗೀಡಾದ ಹತಾಯ್‌ಗೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಬುಧವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ‌ದರು. ಮೊದಲ ದಿನದ ರಕ್ಷಣಾ ಕಾರ್ಯದಲ್ಲಿ ಆದ ನ್ಯೂನತೆಗಳನ್ನು ಒಪ್ಪಿಕೊಂಡ ಅವರು, ವಿಪತ್ತು ಬಾಧಿತ ಪ್ರದೇಶಕ್ಕೆ ಹೆಚ್ಚಿನ ನೆರವು ಕಲ್ಪಿಸಲು ಸ್ಥಳದಲ್ಲೇ ಆದೇಶಿಸಿದರು. ಜತೆಗೆ, ಯಾವುದೇ ಸಂತ್ರಸ್ತ ಬೀದಿಪಾಲಾಗಲು ಆಸ್ಪದ ನೀಡುವುದಿಲ್ಲವೆಂದೂ ವಾಗ್ದಾನ ಮಾಡಿದರು.

ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ಸುಮಾರು 60 ಸಾವಿರ ಸಿಬ್ಬಂದಿ ತೊಡಗಿದ್ದಾರೆ. ಆದರೆ, ಈ ವಿನಾಶದಲ್ಲಿ ಸಿಲುಕಿರುವ ಅನೇಕ ಸಂತ್ರಸ್ತರು ಜೀವ ಬಿಗಿಹಿಡಿದು ನೆರವಿಗಾಗಿ ಇನ್ನೂ ಕಾಯುತ್ತಿದ್ದಾರೆ.

ಅವಶೇಷಗಳಡಿ ಸಿಲುಕಿರುವವರ ತುರ್ತು ರಕ್ಷಣೆ, ಗಾಯಾಳುಗಳಿಗೆ ತಕ್ಷಣದ ನೆರವು ಸಿಗುತ್ತಿಲ್ಲವೆನ್ನುವ ಆಕ್ರೋಶ ಮತ್ತು ಹತಾಶೆ ಸಂತ್ರ‌ಸ್ತರಿಂದ ವ್ಯಕ್ತವಾಗುತ್ತಿರುವುದೂ ವರದಿಯಾಗಿದೆ.

ಏರುತ್ತಲೇ ಇದೆ ಸಾವು–ನೋವು:

ಟರ್ಕಿಯಲ್ಲಿ ಮಂಗಳವಾರದವರೆಗೆ ಸಾವಿನ ಸಂಖ್ಯೆ 7,108 ಇತ್ತು. ಇದು ಬುಧವಾರ 9,638ಕ್ಕೆ ಏರಿಕೆಯಾಯಿತು. 40,910 ಜನರು ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ.

ಸಿರಿಯಾ ಆರೋಗ್ಯ ಸಚಿವಾಲಯದ ಪ್ರಕಾರ, ಸಿರಿಯಾದ ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ 1,250ಕ್ಕೆ ಏರಿದೆ. ಬಂಡುಕೋರರ ಹಿಡಿತದ ವಾಯವ್ಯ ಸಿರಿಯಾದಲ್ಲಿ 1,280 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ ಸಿರಿಯಾದಲ್ಲಿ 4,600ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ ರಿಕ್ಟರ್‌ ಮಾಪಕದ 7.8 ತೀವ್ರತೆಯ ಭೂಕಂಪದಲ್ಲಿ 8,800 ಜನರು ಮೃತಪಟ್ಟಿದ್ದರು. ಇದಕ್ಕೂ ಹಿಂದೆ, ಕಳೆದ ದಶಕ ಆರಂಭದ 2011ರಲ್ಲಿ ಜಪಾನ್‌ ಭೂಕಂಪದಲ್ಲಿ 20 ಸಾವಿರ ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.