ADVERTISEMENT

ಟರ್ಕಿ, ಸಿರಿಯಾ ಭೂಕಂಪ: ಮೃತರ ಸಂಖ್ಯೆ 28 ಸಾವಿರಕ್ಕೆ ಏರಿಕೆ; ಮಗು ರಕ್ಷಣೆ

ಏಜೆನ್ಸೀಸ್
Published 12 ಫೆಬ್ರುವರಿ 2023, 3:09 IST
Last Updated 12 ಫೆಬ್ರುವರಿ 2023, 3:09 IST
ಟರ್ಕಿ, ಸಿರಿಯಾ ಭೂಕಂಪ
ಟರ್ಕಿ, ಸಿರಿಯಾ ಭೂಕಂಪ   

ಕಹ್ರಮನ್ಮರಸ್‌: ಪ್ರಬಲ ಭೂಕಂಪ ಸಂಭವಿಸಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಮೃತಪಟ್ಟವರ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ಭಾನುವಾರ 7 ತಿಂಗಳ ಮಗು ಹಾಗೂ 13 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

ಭೂಕಂಪ ಸಂಭವಿಸಿದ 140 ಗಂಟೆಗಳ ಬಳಿಕ ಹಮ್ಜಾ ಎಂಬ 7 ತಿಂಗಳ ಮಗುವನ್ನು ಇಲ್ಲಿನ ಹಟೇಯಲ್ಲಿ ರಕ್ಷಿಸಲಾಗಿದೆ. 13 ವರ್ಷದ ಎಸ್ಮಾ ಸುಲ್ತಾನ್ ಎಂಬ ಬಾಲಕಿಯನ್ನು ಗಾಜಿಯಾಟೆಪ್‌ನಲ್ಲಿ ರಕ್ಷಣೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪನದಿಂದ ಹಾನಿಗೊಳಗಾದ ಪ್ರದೇಶದ ಅವಶೇಷಗಳಡಿಯಿಂದ ಭಾನುವಾರ ಬೆಳಗ್ಗೆಯೂ ಮಕ್ಕಳನ್ನು ಹೊರ ತರಲಾಗಿದ್ದು, ರಕ್ಷಣಾ ಕಾರ್ಯಕ್ಕೆ ಆಶಾಕಿರಣವಾಗಿ ಪರಿಣಮಿಸಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಅವಶೇಷಗಳಡಿಯಲ್ಲಿ ಬದುಕುಳಿದವರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ADVERTISEMENT

ಈ ನಡುವೆ ಟರ್ಕಿ ಹಾಗೂ ಸಿರಿಯಾದಲ್ಲಿ ಒಟ್ಟು 8.7 ಲಕ್ಷ ಮಂದಿಗೆ ತುರ್ತಾಗಿ ಆಹಾರ ಪೂರೈಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪದಿಂದ 2.6 ಕೋಟಿ ಜನರು ಸಂತ್ರಸ್ತರಾಗಿದ್ದಾರೆ. ಸಿರಿಯಾದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ಸೋಮವಾರ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸಾವಿನ ಸಂಖ್ಯೆ ಇನ್ನು ಹೆಚ್ಚುವ ಸಂಭವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.