ಅಪಘಾತ -ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಅಮೆರಿಕ-ಕೆನಡಾ ಗಡಿ ದಾಟುವಿಕೆ ವೇಳೆ ನಯಾಗರ ಜಲಪಾತದ ಬಳಿ ವಾಹನ ಸ್ಫೋಟಗೊಂಡಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಸಿಬಿಎಸ್ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಘಟನೆ ಬೆನ್ನಲ್ಲೇ ತನಿಖಾಧಿಕಾರಿಗಳ ಸೂಚನೆ ಮೇರೆಗೆ ಈ ಪ್ರದೇಶದಲ್ಲಿ ನಾಲ್ಕು ಅಮೆರಿಕ-ಕೆನಡಾ ಗಡಿಗಳನ್ನು ಮುಚ್ಚಲಾಗಿದೆ ಎಂದು ಅದು ಹೇಳಿದೆ.
ಸ್ಫೋಟಗೊಂಡ ವಾಹನದೊಳಗಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮೃತಪಟ್ಟವರ ರಾಷ್ಟ್ರೀಯತೆ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಅಮೆರಿಕ ಕಡೆಯಿಂದ ಬರುತ್ತಿತ್ತು ಎಂದು ಅಮೆರಿಕದ ಹಿರಿಯ ಕಾನೂನು ಜಾರಿ ಅಧಿಕಾರಿಯೊಬ್ಬರು ಸಿಬಿಎಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಕಸ್ಟಮ್ಸ್ ಠಾಣೆಗೆ ಡಿಕ್ಕಿ ಹೊಡೆದು ವಾಹನ ಸುಟ್ಟು ಕರಕಲಾಗಿದೆ. ಕಾರು ಏಕೆ ಸ್ಫೋಟಗೊಂಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಘಟನೆ ಸಂಭವಿಸಿದ ಸಂದರ್ಭ ತಾನು ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಗಡಿ ದಾಟುವ ದಿಕ್ಕಿನಲ್ಲಿ ವಾಹನವು ವೇಗವಾಗಿ ಬರುತ್ತಿರುವುದನ್ನು ಗಮನಿಸಿದ್ದೇನೆ ಎಂದು ಕೆನಡಾದ ಮೈಕ್ ಗುಂಟೆರ್ ಎಂಬವರು ಹೇಳಿದ್ದಾರೆ.
‘ಅದು ಗಂಟೆಗೆ 100 ಮೈಲಿಗಳಿಗೂ ಅಧಿಕ ವೇಗದಲ್ಲಿ ಚಲಿಸುತ್ತಿತ್ತು. ತಂತಿ ಬೇಲಿಗೆ ಡಿಕ್ಕಿ ಹೊಡೆದ ಕಾರು ಗಾಳಿಯಲ್ಲಿ ಹಾರಿತು. ಈ ಸಂದರ್ಭ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದೆ’ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.