ADVERTISEMENT

ಶ್ರೀಲಂಕಾದ ಇಬ್ಬರು ಮಾಜಿ ಸಚಿವರಿಗೆ ಕ್ರಮವಾಗಿ 20, 25 ವರ್ಷ ಕಠಿಣ ಜೈಲು ಶಿಕ್ಷೆ

ಪಿಟಿಐ
Published 29 ಮೇ 2025, 9:37 IST
Last Updated 29 ಮೇ 2025, 9:37 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಕೊಲಂಬೊ: 2015ರ ಅಧ್ಯಕ್ಷೀಯ ಚುನಾವಣೆ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಶ್ರೀಲಂಕಾದ ಇಬ್ಬರು ಮಾಜಿ ಸಚಿವರಿಗೆ ಕೊಲಂಬೊ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.

2010ರಿಂದ 2015ರವರೆಗೆ ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸಿದ್ದ ಮಹಿಂದಾನಂದ ಅಲುತ್‌ಗಮಗೆ ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ, 2022ರಿಂದ 2024ರವರೆಗೆ ವ್ಯಾಪಾರ ಸಚಿವರಾಗಿದ್ದ ನಳಿನ್ ಫರ್ನಾಂಡೊ ಅವರಿಗೆ ಕೊಲಂಬೊ ಹೈಕೋರ್ಟ್ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ADVERTISEMENT

2015ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಕ್ರೀಡಾ ಸಾಮಗ್ರಿಗಳ ಖರೀದಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ 53 ಮಿಲಿಯನ್ ರೂಪಾಯಿ ನಷ್ಟವನ್ನು ಉಂಟುಮಾಡಿದ್ದಕ್ಕಾಗಿ ಈ ಇಬ್ಬರು ತಪ್ಪಿತಸ್ಥರೆಂದು ಸಾಬೀತಾಗಿದೆ. ಕ್ರೀಡಾ ಕ್ಲಬ್‌ಗಳಿಗೆ ವಿತರಿಸಲು 2014ರ ಸೆಪ್ಟೆಂಬರ್ 1 ಮತ್ತು ಡಿಸೆಂಬರ್ 31ರ ನಡುವೆ ಕನಿಷ್ಠ 14,000 ಕೇರಂ ಬೋರ್ಡ್‌ಗಳು ಮತ್ತು 11,000 ಡ್ರಾಫ್ಟ್ ಬೋರ್ಡ್‌ಗಳನ್ನು ಖರೀದಿಸಲಾಗಿತ್ತು. ಈ ಸಾಮಗ್ರಿಗಳನ್ನು ಖರೀದಿಸಿದ ಸರ್ಕಾರಿ ಸ್ವಾಮ್ಯದ ಸಗಟು ವ್ಯಾಪಾರ ಸಂಸ್ಥೆಗೆ ಫರ್ನಾಂಡೊ ಮುಖ್ಯಸ್ಥರಾಗಿದ್ದರು.

2019ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ತಾಂತ್ರಿಕ ಸಮಸ್ಯೆಯಿಂದಾಗಿ 2022ರಲ್ಲಿ ಹಿಂಪಡೆಯಲಾಗಿತ್ತು. ಆದರೂ, ಕಳೆದ ವರ್ಷದ ಚುನಾವಣೆಗೆ ಮುನ್ನ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಜನತಾ ಶಕ್ತಿ (ಎನ್‌ಪಿಪಿ) ಪಕ್ಷವು ಸ್ಥಗಿತಗೊಂಡಿದ್ದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಮರು ಆರಂಭಿಸುವುದಾಗಿ ಪ್ರತಿಜ್ಞೆ ಮಾಡಿತ್ತು.

ಲಂಚ ಅಥವಾ ಭ್ರಷ್ಟಾಚಾರ ಆರೋಪಗಳ ತನಿಖಾ ಆಯೋಗವು ಅಲುತ್‌ಗಮಗೆ ಮತ್ತು ಫರ್ನಾಂಡೊ ವಿರುದ್ಧ ಮೊಕದ್ದಮೆ ಹೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.