ADVERTISEMENT

ಆಸ್ಕರ್‌ ವಿಜೇತ ನಟಿ ಗ್ಲೆಂಡಾ ನಿಧನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 15:28 IST
Last Updated 15 ಜೂನ್ 2023, 15:28 IST
ಗ್ಲೆಂಡಾ ಜಾಕ್ಸನ್‌
ಗ್ಲೆಂಡಾ ಜಾಕ್ಸನ್‌   

ಲಂಡನ್‌: ಎರಡು ಬಾರಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಖ್ಯಾತ ಹಾಲಿವುಡ್‌ ನಟಿ ಮತ್ತು ಬ್ರಿಟನ್‌ ಮಾಜಿ ಸಂಸದೆ ಗ್ಲೆಂಡಾ ಜಾಕ್ಸನ್‌ (87) ಅಲ್ಪಕಾಲದ ಅನಾರೋಗ್ಯದಿಂದ ಅವರ ನಿವಾಸದಲ್ಲಿ ಗುರುವಾರ ನಿಧನರಾಗಿದ್ದಾರೆ. 

‘ಇತ್ತೀಚೆಗಷ್ಟೇ ಅವರು ‘ದಿ ಗ್ರೇಟ್ ಎಸ್ಕೇಪರ್‌’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಈ ಚಿತ್ರದಲ್ಲಿ ಗ್ಲೆಂಡಾ ಅವರು ನಟ ಮೈಕಲ್ ಕೇನ್ ಅವರೊಂದಿಗೆ ಸಹ ನಟಿಯಾಗಿ ಅಭಿನಯಿಸಿದ್ದಾರೆ’ ಎಂದು ಗ್ಲೆಂಡಾ ಅವರ ಪ್ರತಿನಿಧಿ ಲಿಯೋನೆಲ್ ಲಾರ್ನರ್  ಹೇಳಿದರು.

1960 ಮತ್ತು 70ರ ದಶಕದಲ್ಲಿ  ಅತ್ಯಂತ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಗ್ಲೆಂಡಾ ಜಾಕ್ಸನ್ ಅವರು ‘ವುಮೆನ್ ಇನ್‌ ಲವ್‌’ ಮತ್ತು ‘ಎ ಟಚ್‌ ಆಫ್‌ ಕ್ಲಾಸ್‌’ ಸಿನಿಮಾಗಳಲ್ಲಿನ ಅತ್ಯುತ್ತಮ ನಟನೆಗಾಗಿ ಎರಡು ಆಸ್ಕರ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ADVERTISEMENT

ಸಿನಿಮಾ ಜಗತ್ತಿನಿಂದ ರಾಜಕೀಯದತ್ತ ಧುಮುಕಿದ ಗ್ಲೆಂಡಾ ಅವರು ಲೇಬರ್‌ ಪಕ್ಷದ ಸಂಸದೆಯಾಗಿ ಸುಮಾರು 23 ವರ್ಷಗಳ ಕಾಲ ರಾಜಕೀಯ ರಂಗದಲ್ಲೂ ಸಕ್ರಿಯರಾಗಿದ್ದರು. ರಾಜಕಾರಣದಿಂದ ವಿಮುಖರಾದ ಗ್ಲೆಂಡಾ ಮತ್ತೆ ನಟನೆಗೆ ಮರಳಿದರು. ರಂಗಭೂಮಿ ಮತ್ತು ಸಿನಿಮಾಗಳಲ್ಲಿನ ಮನೋಜ್ಞ ಅಭಿನಯದಿಂದ ಗ್ಲೆಂಡಾ ಜನಪ್ರಿಯತೆ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.