ADVERTISEMENT

ಲಾಕ್‌ಡೌನ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದೆ ಎಂದ ರಿಷಿ ಸುನಕ್‌

ಪಿಟಿಐ
Published 6 ಫೆಬ್ರುವರಿ 2022, 14:32 IST
Last Updated 6 ಫೆಬ್ರುವರಿ 2022, 14:32 IST
ರಿಷಿ ಸುನಕ್‌
ರಿಷಿ ಸುನಕ್‌   

ಲಂಡನ್‌: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು 2020ರ ಜೂನ್‌ನಲ್ಲಿ ಕೋವಿಡ್ ಲಾಕ್‌ಡೌನ್‌ ಇದ್ದ ಸಂದರ್ಭದಲ್ಲೇ ಮಾಡಿದ ಜನ್ಮದಿನ ಪಾರ್ಟಿಯಲ್ಲಿ ತಾವು ಭಾಗವಹಿಸಿದ್ದಾಗಿ ಒಪ್ಪಿಕೊಂಡಿರುವ ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್, ತಾವು ಕೊಠಡಿಗೆ ಪ್ರವೇಶಿಸಿದಾಗ ಏನು ನಡೆಯಿತು ಎಂಬುದನ್ನು ಹೇಳಲು ನಿರಾಕರಿಸಿದ್ದಾರೆ.

ಕೋವಿಡ್‌ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ತಾವು ಅಲ್ಲಿಗೆ ತೆರಳಿದ್ದಾಗಿ ಅವರು ಹೇಳಿದ್ದಾರೆ.

ಜಾನ್ಸನ್‌ ಅವರ ಐವರು ಸಹಾಯಕರು ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸುನಕ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಇಡೀ ಬ್ರಿಟನ್‌ ಕೋವಿಡ್‌ ಸಂಕಷ್ಟದಲ್ಲಿ ಸಿಲುಕಿದ್ದಾಗ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಮಾತ್ರ ಹಲವು ಅದ್ಧೂರಿ ಪಾರ್ಟಿಗಳು ನಡೆದಿವೆ ಎಂಬುದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇವರು ರಾಜೀನಾಮೆ ಸಲ್ಲಿಸಿದ್ದರು.

ADVERTISEMENT

ಪ್ರಧಾನಿ ನಿವಾಸದ ಪಕ್ಕದ ನಿವಾಸದಲ್ಲೇ ರಿಷಿ ಸುನಕ್ ಅವರು ನೆಲೆಸಿದ್ದಾರೆ.

‘ಪಾರ್ಟಿ ನಡೆಸಿದ್ದನ್ನು ಪ್ರಧಾನಿ ಅವರು ಒಪ್ಪಿಕೊಂಡಿದ್ದಾರೆ. ಅವರು ದೇಶದ ಜನರಿಗೆ ಸತ್ಯವನ್ನೇ ಹೇಳಿದ್ದಾರೆ. ದೇಶದ ಪ್ರಧಾನಿಯಾಗಿ ಅವರು ಪಾರ್ಟಿ ಮಾಡಿದ್ದರಲ್ಲಿ ತಪ್ಪಿಲ್ಲ’ ಎಂದು ರಿಷಿ ಸುನಕ್‌ ಹೇಳಿದ್ದು, ತಾವು ಪ್ರಧಾನಿ ಆಕಾಂಕ್ಷಿ ಎಂಬುದನ್ನು ಅಲ್ಲಗಳೆದಿದ್ದಾರೆ ಎಂದು ‘ದಿ ಮಿರರ್‌’ ದೈನಿಕ ವರದಿ ಮಾಡಿದೆ.

‘ಲಾಕ್‌ಡೌನ್‌ ಸಮಯದಲ್ಲಿ ಪ್ರಧಾನಿ ಅವರ ಇಂತಹ ಪಾರ್ಟಿಯಿಂದ ಸಾರ್ವಜನಿಕರ ಆತ್ಮವಿಶ್ವಾಸಕ್ಕೆ ಧಕ್ಕೆ ಆಗಿರುವುದು ನಿಜ. ಜನರ ಹತಾಶ ಭಾವನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜನರ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವುದು ಸರ್ಕಾರದಲ್ಲಿರುವ ನಮ್ಮೆಲ್ಲರ ಮತ್ತು ಎಲ್ಲ ರಾಜಕಾರಣಿಗಳು ಕೆಲಸವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯನಾಗಿರುವ ಸುನಕ್‌ ಅವರು 2015ರಲ್ಲಿ ಮೊದಲ ಬಾರಿಗೆ ಯಾರ್ಕ್‌ಶೈರ್‌ನ ರಿಚ್ಮಂಡ್‌ನಿಂದ ಸಂಸದರಾಗಿ ಆಯ್ಕೆಯಾದರು. 2020ರ ಫೆಬ್ರುವರಿಯಲ್ಲಿ ದೇಶದ ಪ್ರಮುಖ ಸಂಪುಟ ಹುದ್ದೆಯಾದ ಛಾನ್ಸಲರ್‌ ಹುದ್ದೆಗೇರಿದ್ದರು. ಬ್ರೆಕ್ಸಿಟ್‌ನ ಪ್ರಬಲ ಪ್ರತಿಪಾದಕರಾದ ಅವರು, ಐರೋಪ್ಯ ಸಮುದಾಯದಿಂದ ಹೊರಬರುವ ಪ್ರಧಾನಿ ಜಾನ್ಸನ್‌ ಅವರ ನಿರ್ಧಾರಕ್ಕೆ ಬೆನ್ನೆಲುಬಾಗಿದ್ದರು. ಹಣಕಾಸು ಸಚಿವರ (ಛಾನ್ಸಲರ್‌ ಆಫ್‌ ಎಕ್ಸ್‌ಚೆಕರ್‌) ಹುದ್ದೆಗೇರಿದ ಭಾರತೀಯ ಮೂಲದ ಪ್ರಥಮ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರೇ ಜಾನ್ಸನ್‌ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.