ADVERTISEMENT

ಬ್ರಿಟನ್ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ

ರಾಯಿಟರ್ಸ್
Published 21 ಏಪ್ರಿಲ್ 2023, 11:03 IST
Last Updated 21 ಏಪ್ರಿಲ್ 2023, 11:03 IST
 ಡೊಮಿನಿಕ್ ರಾಬ್
ಡೊಮಿನಿಕ್ ರಾಬ್   

ಲಂಡನ್: ಸಹೋದ್ಯೋಗಿಗಳಿಗೆ ಬೆದರಿಕೆ ಆರೋಪ ಕುರಿತಾದ ದೂರುಗಳ ಸ್ವತಂತ್ರ ತನಿಖೆ ಬೆನ್ನಲ್ಲೇ ಬ್ರಿಟನ್ ಉಪ ಪ್ರಧಾನಮಂತ್ರಿ ಮತ್ತು ಕಾನೂನು ಸಚಿವ ಡೊಮಿನಿಕ್ ರಾಬ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಪ್ರಧಾನಿ ರಿಷಿ ಸುನಕ್‌ಗೆ ಬರೆದ ಪತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರಣೆಯು ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿಯಾಗುತ್ತಿದೆ. ಆದರೆ, ಸರ್ಕಾರಕ್ಕೆ ತಮ್ಮ ಬೆಂಬಲ ಮುಂದುವರಿಸುವುದಾಗಿ ರಾಬ್ ತಿಳಿಸಿದ್ದಾರೆ.

ಹಲವು ಪೌರ ಕಾರ್ಮಿಕರು ಮಾಡಿರುವ ರಾಬ್ ವಿರುದ್ಧ ಮಾಡಿರುವ ಆರೋಪಗಳ ಕುರಿತಾದ ಸ್ವತಂತ್ರ ತನಿಖಾ ವರದಿಯನ್ನು ಗುರುವಾರ ಪ್ರಧಾನಿ ರಿಷಿ ಸುನಕ್‌ಗೆ ಸಲ್ಲಿಸಲಾಗಿತ್ತು.

ADVERTISEMENT

ತನಿಖೆ ಆಗಲಿ ಎಂದು ನಾನು ಕರೆ ನೀಡಿದ್ದೆ. ನಾನು ಬೆದರಿಸಿರುವುದು ತಿಳಿದುಬಂದರೆ ರಾಜೀನಾಮೆ ನೀಡುವೆ ಎಂದಿದ್ದೆ. ಈಗ ನನ್ನ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಈ ವಿಚಾರಣೆಯು ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ. ಇದು ಮಂತ್ರಿಗಳ ವಿರುದ್ಧ ನಕಲಿ ದೂರುಗಳನ್ನು ಪ್ರೋತ್ಸಾಹಿಸುತ್ತದೆ. ನಿಮ್ಮ ಸರ್ಕಾರದ ಪರವಾಗಿ ಬದಲಾವಣೆಗಾಗಿ ದುಡಿಯುವವರಿಗೆ ತಣ್ಣೀರೆರಚುತ್ತದೆ ಎಂದು ಹೇಳಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು, ಈ ಕುರಿತಾದ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಕಳೆದ ನವೆಂಬರ್‌ನಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದ ರಾಬ್, ತನಿಖೆಗೆ ಒತ್ತಾಯಿಸಿದ್ದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜೀನಾಮೆ ನೀಡಿದ ಮೂರನೇ ಹಿರಿಯ ಸಚಿವ ರಾಬ್ ಆಗಿದ್ದಾರೆ.

ಬ್ರಿಟನ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲ ವಾರಗಳು ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಸಚಿವರ ರಾಜೀನಾಮೆ ಕನ್ಸರ್ವೇಟಿವ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.