ADVERTISEMENT

ಕೌಶಲ ಇಲ್ಲದವರಿಗೆ ಬ್ರಿಟನ್‌ನಲ್ಲಿ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 19:30 IST
Last Updated 16 ಫೆಬ್ರುವರಿ 2020, 19:30 IST
.
.   

ಲಂಡನ್‌ : ಕುಶಲಿಗರಲ್ಲದ ವಿದೇಶಿ ಕೆಲಸಗಾರರಿಗೆ ಬ್ರಿಟನ್‌ನಲ್ಲಿ ಮುಂದಿನ ವರ್ಷದಿಂದ ಅವಕಾಶ ಕಡಿಮೆಯಾಗಲಿದೆ.

ಕುಶಲ ಕೆಲಸಗಾರರ ನೇಮಕಕ್ಕೂ ಹೊಸ ನಿಯಮಗಳು ಅನ್ವಯವಾಗಲಿವೆ. ಬ್ರಿಟನ್‌ನಲ್ಲಿ ಕೆಲಸ ಮಾಡಲು ಬಯಸುವ ವಿದೇಶಿಯರಿಗೆ ನೇಮಕಾತಿ ಆದೇಶ ಇದ್ದರಷ್ಟೇ ಆ ದೇಶಕ್ಕೆ ಪ್ರವೇಶ ಸಾಧ್ಯ.

ಇಂತಹ ಕೆಲಸಗಾರರಿಗೆ ಇಂಗ್ಲಿಷ್‌ ತಿಳಿದಿರಲೇಬೇಕು ಮತ್ತು ಅಲ್ಲಿನ ವೇತನ ನಿಯಮಗಳಿಗೆ ಅನುಗುಣವಾದ ಸಂಬಳ ಇರಬೇಕು.

ADVERTISEMENT

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಜನವರಿ 31ರಂದು ಹೊರಗೆ ಬಂದಿದೆ. ಆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಈ ವರ್ಷದ ಡಿಸೆಂಬರ್ 31ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ನಿಯಮಗಳಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದರೆ, ಮುಂದಿನ ವರ್ಷದ ಆರಂಭದಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿವೆ.

ಐರೋಪ್ಯ ಒಕ್ಕೂಟದಲ್ಲಿರುವ ದೇಶಗಳ ಜನರು ಸದಸ್ಯ ರಾಷ್ಟ್ರಗಳ ನಡುವೆ ಮುಕ್ತವಾಗಿ ಓಡಾಡಲು ಅವಕಾಶ ಇದೆ. ಹಾಗಾಗಿ, ಯುರೋಪ್‌ನ ಇತರ ದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟನ್‌ಗೆ ಬರುತ್ತಿದ್ದರು. ದೇಶಕ್ಕೆ ಬರುವ ಈ ಜನರನ್ನು ತಡೆಯಬೇಕು ಎಂಬುದು ಕೂಡ ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಗೆ ಬರುವುದರ ಪರ (ಬ್ರೆಕ್ಸಿಟ್‌) ಜನರು 2016ರ ಜನಮತನಗಣನೆಯಲ್ಲಿ ಮತ ಹಾಕಲು ಕಾರಣವಾಗಿತ್ತು.

‘ನಮ್ಮ ಹೊಸ ವಲಸೆ ನೀತಿಯಲ್ಲಿ ಕಡಿಮೆ ವೇತನದ, ಕುಶಲಿಗರಲ್ಲದ ಕೆಲಸಗಾರರಿಗೆ ಅವಕಾಶ ಇರುವುದಿಲ್ಲ’ ಎಂದು ಬ್ರಿಟನ್‌ನ ಆಂತರಿಕ ವ್ಯವಹಾರಗಳ ಸಚಿವೆ ಪ್ರೀತಿ ಪಟೇಲ್‌ ಹೇಳಿದ್ದಾರೆ. ಈ ನೀತಿಯ ಪರಿಣಾಮವಾಗಿ ಬ್ರಿಟನ್‌ನಲ್ಲಿ ಕೆಲಸಗಾರರ ಸಂಖ್ಯೆ ಕಡಿಮೆಯಾಗಬಹುದು ಎಂದೂ ಅವರು ಅಂದಾಜಿಸಿದ್ದಾರೆ.

ಈ ವಲಸೆ ನೀತಿಯಿಂದಾಗಿ ಆರೋಗ್ಯ ಸೇವೆಯಂತಹ ಕೆಲವು ಸಾರ್ವಜನಿಕ ಸೇವೆಗಳಿಗೆ ಧಕ್ಕೆಯಾಗಬಹುದು ಎಂದು ವಿರೋಧ ಪಕ್ಷಗಳ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಐರೋಪ್ಯ ಒಕ್ಕೂಟದ ದೇಶಗಳ ವೈದ್ಯರು ಮತ್ತು ನರ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ಕುಶಲ ಕೆಲಸಗಾರರ ಕೊರತೆ ಇರುವ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಿ ಅವರ ನೇಮಕ ಸುಲಲಿತವಾಗುವಂತೆ ಮಾಡುವ ಯೋಜನೆಯನ್ನೂ ಬ್ರಿಟನ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.