ADVERTISEMENT

ಟಿ.ವಿ ಚರ್ಚೆಯಲ್ಲಿ ಸ್ವಪಕ್ಷದ ಸಂಸದರಿಂದಲೇ ತೀವ್ರ ತರಾಟೆಗೆ ಒಳಗಾದ ಸುನಕ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 15:48 IST
Last Updated 29 ಜುಲೈ 2022, 15:48 IST
ರಿಷಿ ಸುನಕ್‌ 
ರಿಷಿ ಸುನಕ್‌    

ಲಂಡನ್‌: ಕನ್ಸರ್ವೇಟಿವ್‌ ಪಕ್ಷದ ನಾಯಕತ್ವ ಮತ್ತು ಬ್ರಿಟನ್‌ ಪ್ರಧಾನಿ ಹುದ್ದೆಗೆ ಅಂತಿಮ ಕಣದಲ್ಲಿರುವ ಲಿಸ್‌ ಟ್ರಸ್‌ ಅವರ ಪ್ರತಿಸ್ಪರ್ಧಿ, ಭಾರತಮೂಲದ ರಿಷಿ ಸುನಕ್‌ ಚುನಾವಣಾ ಪ್ರಚಾರದ ಟಿ.ವಿ ಚರ್ಚೆಯಲ್ಲಿ ಸ್ವಪಕ್ಷದ ಸಂಸದರಿಂದ ತಮ್ಮ ಆರ್ಥಿಕ ಮತ್ತು ತೆರಿಗೆ ನೀತಿಗಳಿಗಾಗಿ ತೀವ್ರ ತರಾಟೆಗೆ ಒಳಗಾದರು.

ದೇಶದಲ್ಲಿನ ಆರ್ಥಿಕತೆ ಮತ್ತು ಜೀವನ ವೆಚ್ಚ ಹೆಚ್ಚಳ ಬಿಕ್ಕಟ್ಟು ಈ ಹಿಂದಿನ ಟಿ.ವಿ ಚರ್ಚೆಗಳಲ್ಲೂ ಕೇಂದ್ರಬಿಂದುವಾಗಿತ್ತು. ಉತ್ತರ ಇಂಗ್ಲೆಂಡ್‌ನ ಯಾರ್ಕ್‌ಶೈರ್‌ನ ಲೀಡ್ಸ್‌ನಲ್ಲಿ ಗುರುವಾರ ರಾತ್ರಿ ನಡೆದ ಚರ್ಚೆಯಲ್ಲೂ ಇಂತಹವೇ ವ್ಯಾಪಕ ಪ್ರಶ್ನೆಗಳನ್ನು ಸುನಕ್‌ ಎದುರಿಸಿದರು.

ಟೋರಿ ಸದಸ್ಯರೊಬ್ಬರು ಈ ತಿಂಗಳ ಆರಂಭದಲ್ಲಿ ಚಾನ್ಸಲರ್ ಹುದ್ದೆಗೆ ರಾಜೀನಾಮೆ ನೀಡಿದ ಸುನಕ್ ಅವರ ನಿರ್ಧಾರವನ್ನು ಪ್ರಶ್ನಿಸಿದರು. ‘ತಮ್ಮ ಮಾಜಿ ಬಾಸ್‌ ಬೆನ್ನಿಗೆ ಇರಿದಿದ್ದೀರಿ’ ಎಂದು ಆರೋಪಿಸಿದರು.

ADVERTISEMENT

‘ನೀವೊಬ್ಬ ಉತ್ತಮ ಸೇಲ್ಸ್‌ಮನ್‌. ನಿಮ್ಮಲ್ಲಿ ಅಂತಹ ಹಲವು ಗುಣಗಳಿವೆ. ಆದರೆ, ಹಲವು ಜನರು ತಮ್ಮ ಬೆಂಬಲವನ್ನು ಬೋರಿಸ್‌ ಜಾನ್ಸನ್‌ ಅವರಿಗೆ ಮುಂದುವರಿಸಿದ್ದಾರೆ’ ಎಂದು ವೆಸ್ಟ್‌ ಯಾರ್ಕ್‌ಶೈರ್‌ನ ಪ್ರತಿನಿಧಿ ವಾಗ್ದಾಳಿ ಮಾಡಿದರು.

‘ರಿಷಿ ಸುನಕ್‌ ಕ್ಯಾಬಿನೆಟ್‌ ಸಚಿವರಾಗಲೂ ಸಮರ್ಥರಲ್ಲ.ವಿದೇಶಾಂಗ ಸಚಿವೆ ಲಿಜ್‌ ಟ್ರಸ್‌ ಅವರು ಮಾತ್ರ ದೇಶ ಮುನ್ನಡೆಸಬಲ್ಲರು’ ಎಂದಿರುವ ಬ್ರಿಟನ್‌ ರಕ್ಷಣಾ ಸಚಿವ ಬೆನ್‌ ವ್ಯಾಲೇಸ್‌ ಕೂಡ ಟ್ರಸ್‌ ಅವರ ಬೆಂಬಲಕ್ಕೆ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.