ಕೀವ್: ಉಕ್ರೇನ್ ಮಿಲಿಟರಿಯು ಸೆರೆಹಿಡಿದಿರುವ ರಷ್ಯಾದ ಸೈನಿಕರನ್ನು ಮಾಧ್ಯಮದ ಮುಂದೆ ಪರೇಡ್ ಮಾಡಿ, ಅವರ ಆಕ್ರಮಣಕ್ಕಾಗಿ ಪಶ್ಚಾತ್ತಾಪ ಪಡುವಂತೆ ಮಾಡಿದೆ. ಇದನ್ನು ಖಂಡಿಸಿರುವ ರೆಡ್ ಕ್ರಾಸ್ ಸಂಸ್ಥೆ ಕೈದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು ಎಂದು ಎಚ್ಚರಿಸಿದೆ.
ಮಾರ್ಚ್ 4ರ ಪತ್ರಿಕಾಗೋಷ್ಠಿಯಲ್ಲಿ ಕೆಂಪಾದ ಕಣ್ಣು, ಮುಖ ತರಚಿದ ಗಾಯ ಮತ್ತು ಹಸಿರು ಸಮವಸ್ತ್ರ ಧರಿಸಿರುವ 10 ಮಂದಿ ರಷ್ಯಾದ ಯೋಧರನ್ನು ಪತ್ರಿಕಾ ಪ್ರತಿನಿಧಿಗಳು ಮತ್ತು ಕ್ಯಾಮೆರಾಗಳ ಮುಂದೆ ಪರೇಡ್ ನಡೆಸಲಾಗಿತ್ತು.
ಅವರಲ್ಲಿ ಕೆಲವರು ತಲೆ ಬಗ್ಗಿಸಿ ತಮ್ಮ ಬೂಟುಗಳನ್ನೇ ನೋಡುತ್ತಾ ಕ್ಯಾಮೆರಾಗಳಿಗೆ ಮುಖ ತೋರಿಸುವುದನ್ನು ತಪ್ಪಿಸುತ್ತಿದ್ದರು. ಅದು ಉಕ್ರೇನ್‌ನ ಎಸ್‌ಬಿಯು ಗುಪ್ತಚರ ಸಂಸ್ಥೆಯು ಒಂದು ವಾರದಲ್ಲಿ ಆಯೋಜಿಸಿದ ಎರಡನೇ ಪರೇಡ್ ಆಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಡ್ ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯು,‘ಯುದ್ಧ ಕೈದಿಗಳು ಮತ್ತು ಬಂಧಿಸಲ್ಪಟ್ಟ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು’ ಎಂದು ಹೇಳಿದೆ.
‘ಕೈದಿಗಳ ಜೊತೆ ಕೆಟ್ಟ ವರ್ತನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜನರ ಕುತೂಹಲ ತಣಿಸಲು ಅವರ(ಕೈದಿಗಳ) ಚಿತ್ರಗಳನ್ನು ಪ್ರಸಾರ ಮಾಡಬಾರದು’ ಎಂದು ಅದು ತಿಳಿಸಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ಎಎಫ್‌ಪಿ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉಕ್ರೇನ್ ರಕ್ಷಣಾ ಇಲಾಖೆ ಮತ್ತು ಗುಪ್ತಚರ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.