ADVERTISEMENT

ಗೊಂದಲಕ್ಕೀಡಾಗಿರುವ ರಷ್ಯಾದ ಯೋಧರು: ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 7:32 IST
Last Updated 3 ಮಾರ್ಚ್ 2022, 7:32 IST
ಉಕ್ರೇನ್‌ನ ಅಧ್ಯಕ್ಷ ವೊಲೊಡಿಮೀರ್‌ ಝೆಲೆನ್‌ಸ್ಕಿ
ಉಕ್ರೇನ್‌ನ ಅಧ್ಯಕ್ಷ ವೊಲೊಡಿಮೀರ್‌ ಝೆಲೆನ್‌ಸ್ಕಿ   

ಕೀವ್‌: ರಷ್ಯಾ ಪಡೆ ಉಕ್ರೇನ್‌ ಪ್ರಮುಖ ನಗರಗಳಲ್ಲಿ ಒಂದಾದ ಖೆರ್ಸನ್‌ ನಗರವನ್ನು ವಶಕ್ಕೆ ಪಡೆದಿರುವ ಬೆನ್ನಲ್ಲೇ, ' 'ರಷ್ಯಾ ಪಡೆಗೆ ದಿಕ್ಕುದಿಸೆಯಿಲ್ಲ' ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮೀರ್‌ ಝೆಲೆನ್‌ಸ್ಕಿ ವ್ಯಾಖ್ಯಾನಿಸಿದ್ದಾರೆ.

'ಒಂದು ವಾರದಲ್ಲಿ ಶತ್ರುಗಳ ಯೋಜನೆಗಳನ್ನು ಬುಡಮೇಲು ಮಾಡಿದ್ದೇವೆ. ನಮ್ಮ ರಾಷ್ಟ್ರದ ಮೇಲೆ ಮತ್ತು ನಮ್ಮ ಜನರ ಮೇಲೆ ದ್ವೇಷವನ್ನು ಬಿತ್ತುವ ಮೂಲಕ ಅವರುಪೂರ್ವ ಉದ್ದೇಶಿತ ಮತ್ತು ಅಗೌರವಯುತವಾಗಿ ವರ್ಷಗಳಿಂದ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ನಮ್ಮ ಎಲ್ಲ ಜನರಲ್ಲಿ ಎರಡು ವಿಚಾರಗಳಿವೆ. ಅದು ಸ್ವತಂತ್ರತೆ ಮತ್ತು ಸಹೃದಯತೆ' ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

'ನಾವು ಅವರನ್ನು ನಿಯಂತ್ರಿಸಿದ್ದೇವೆ ಮತ್ತು ಅವರಿಗೆ ತಿರುಗೇಟು ನೀಡುತ್ತಿದ್ದೇವೆ. ಪ್ರತಿದಿನ ನಮ್ಮ ಯೋಧರು, ನಮ್ಮ ಭದ್ರತಾ ಪಡೆ ಸಿಬ್ಬಂದಿ, ಪ್ರಾದೇಶಿಕ ರಕ್ಷಕರು, ಸಾಮಾನ್ಯ ರೈತರೂ ರಷ್ಯಾ ಪಡೆಯ ಸೈನಿಕರನ್ನು ಸೆರೆ ಹಿಡಿಯುತ್ತಿದ್ದಾರೆ. ಎಲ್ಲರೂ ಹೇಳುತ್ತಿರುವ ವಿಷಯವೊಂದೆ, ಅವರಿಗೆ ಯಾಕೆ ಇಲ್ಲಿದ್ದೇವೆ ಎಂಬ ವಿಷಯವೇ ಗೊತ್ತಿಲ್ಲ' ಎಂದು ಝೆಲೆನ್‌ಸ್ಕಿ ವಿವರಿಸಿದ್ದಾರೆ.

ADVERTISEMENT

'ಅವರು ನಮಗಿಂತ 10 ಪಟ್ಟು ಹೆಚ್ಚಿದ್ದರೂ ನೈತಿಕವಾಗಿ ಕುಗ್ಗುತ್ತಿದ್ದಾರೆ. ಅವರು ಯಾರೂ ಅಗಾಧ ಶಕ್ತಿಯನ್ನು ಹೊಂದಿರುವ ಯೋಧರಲ್ಲ. ಅವರು ಬಳಕೆಯಾಗುತ್ತಿರುವ ಗೊಂದಲದ ಗೂಡಾದ ಮಕ್ಕಳು' ಎಂದು ರಷ್ಯಾ ಸೈನಿಕರನ್ನು ಉದ್ದೇಶಿಸಿ ಝೆಲೆನ್‌ಸ್ಕಿ ಜರೆದಿದ್ದಾರೆ.

ಫೇಸ್ಬುಕ್‌ನಲ್ಲಿ ಅಪ್ಲೋಡ್‌ ಮಾಡಿರುವ ಝೆಲೆನ್‌ಸ್ಕಿ ಅವರ ವಿಡಿಯೊ ಭಾಷಣವನ್ನು 'ದಿ ನ್ಯೂಯಾರ್ಕ್‌ ಟೈಮ್ಸ್‌' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.