ADVERTISEMENT

ಚೀನಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಲೈಂಗಿಕ ಕಿರುಕುಳ; ವಿಶ್ವಸಂಸ್ಥೆ ಕಳವಳ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 7:58 IST
Last Updated 5 ಫೆಬ್ರುವರಿ 2021, 7:58 IST
   

ನ್ಯೂಯಾರ್ಕ್‌: ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಸಿನ್‌ಜಿಯಾಂಗ್‌ನ ನಿರ್ಬಂಧಿತ ಪ್ರದೇಶದಲ್ಲಿ ಚೀನಾ ಸರ್ಕಾರ ತೆರೆದಿರುವ ಮರು–ಶಿಕ್ಷಣ ಕೇಂದ್ರಗಳು ಎನ್ನಲಾಗುವ ವೃತ್ತಿಪರ ತರಬೇತಿ / ವ್ಯಕ್ತಿತ್ವ ವಿಕಸನ / ಕಾರ್ಮಿಕ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂದು ಬ್ರಿಟನ್‌ ಮೂಲದ ಸುದ್ದಿ ಸಂಸ್ಥೆ ‘ಸ್ಪುಟ್ನಿಕ್’ ಆರೋಪಿಸಿದೆ. ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್, ಮಾನವ ಹಕ್ಕುಗಳ ಆಯೋಗದ ಹೈಕಮಿಷನರ್‌ ಅವರು ಅಲ್ಲಿಗೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ.

ಶಿಬಿರಗಳಲ್ಲಿರುವ ಉಯಿಗರ್‌ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಅಲ್ಲಿ ಸಿಲುಕಿದ್ದ ವ್ಯಕ್ತಿ ಹಾಗೂ ಮಾಜಿ ಭದ್ರತಾ ಸಿಬ್ಬಂದಿಯೊಬ್ಬರು ಸಂದರ್ಶನದ ವೇಳೆ ತಿಳಿಸಿದ್ದಾರೆ ಎಂದು ‘ಸ್ಪುಟ್ನಿಕ್’ ವರದಿ ಮಾಡಿದೆ.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಡುಜಾರಿಕ್‌, ‘ವರದಿಯಲ್ಲಿರುವ ಆರೋಪಗಳ ಸ್ವರೂಪ ಮತ್ತು ಈ ಆರೋಪಗಳನ್ನು ಶಿಬಿರಾಧಿಕಾರಿಗಳು ನಿರಾಕರಿಸಿರುವುದನ್ನು ಮಾನವ ಹಕ್ಕುಗಳ ಆಯೋಗ ಗಣನೆಗೆ ತೆಗೆದುಕೊಳ್ಳಬೇಕು. ಆಯೋಗದ ಉದ್ದೇಶಿತ ಧ್ಯೇಯಕ್ಕೆ ಅನುಗುಣವಾಗಿ ಹಿಂದೆಂದಿಗಿಂತಲೂ ಮುಖ್ಯವಾಗಿ ಈಗ ಹೈಕಮಿಷನರ್ ಅವರು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ನನಗನಿಸುತ್ತದೆ’ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ರಾಜ್ಯ ಸಚಿವಾಲಯ, ‘ಉಯಿಗರ್‌ ಸಮುದಾಯದ ಮಹಿಳೆಯರು ಮತ್ತು ಇತರ ಮುಸ್ಲಿಂ ಮಹಿಳೆಯರ ಮೇಲೆ ನಿರ್ಬಂಧಿತ ಪ್ರದೇಶದಲ್ಲಿರುವ ಶಿಬಿರಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ವರದಿಯಿಂದ ನಾವು ತುಂಬಾ ವಿಚಲಿತರಾಗಿದ್ದೇವೆ. ಈ ಆಘಾತಕಾರಿ ಆರೋಪದ ಬಗ್ಗೆ ಅಂತರರಾಷ್ಟ್ರೀಯ ಪರಿವೀಕ್ಷಕರು ತಕ್ಷಣವೇ ಸ್ವತಂತ್ರ ತನಿಖೆ ನಡೆಸಲು ಪೀಪಲ್ಸ್ ರಿಪಬ್ಲಿಕ್‌ ಆಫ್ ಚೀನಾ (ಪಿಆರ್‌ಸಿ) ಅಧಿಕಾರಿಗಳು ಅವಕಾಶ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದೆ.

ಈ ಕೇಂದ್ರಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಬಲವಂತವಾಗಿ ಸಂತಾನಹರಣ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವರದಿಗಳು ಈ ಹಿಂದೆ ಪ್ರಕಟವಾಗಿದ್ದವು. ಆ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವಾಲಯ, ‘ಶಿಬಿರಗಳಲ್ಲಿ ಬಲವಂತವಾಗಿ ಇರಿಸಿಕೊಳ್ಳಲಾಗಿರುವ ಜನರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಮತ್ತು ಈ ಕೇಂದ್ರಗಳನ್ನು ನಿಷೇಧಿಸಬೇಕು ಎಂದು ಪಿಆರ್‌ಸಿ ನಾಯಕರಿಗೆ ಅಮೆರಿಕ ಒತ್ತಾಯಿಸುತ್ತದೆ. ಜನನ ನಿಯಂತ್ರಣ ಕ್ರಮಗಳನ್ನು ಕೊನೆಗಾಣಿಸಬೇಕು. ಉಯಿಗರ್ಹಾಗೂಇತರಅಲ್ಪಸಂಖ್ಯಾತ ಜನಾಂಗದವರ ಮೇಲಿನ ಎಲ್ಲ ರೀತಿಯ ದೌರ್ಜನ್ಯಗಳು ನಿಲ್ಲಬೇಕು’ ಎಂದೂ ಒತ್ತಾಯಿಸಿದೆ.

ಅಂದಹಾಗೆ ಚೀನಾ ಎಂದಿನಂತೆ ಈ ಬಾರಿಯೂ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದೆ. ಈ ದೇಶದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಅವರು, ಮರು–ಶಿಕ್ಷಣ ಕೇಂದ್ರಗಳಲ್ಲಿ ‘ಸಂವಿಧಾನ ಮತ್ತು ಕಾನೂನು’ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅಲ್ಲಿ ಇರುವವರ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಲಾಗಿದೆ. ದೌರ್ಜನ್ಯ ಮತ್ತು ಇತರ ಕೆಟ್ಟ ಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.