
ನ್ಯೂಯಾರ್ಕ್: ವಿಶ್ವದಾದ್ಯಂತ ಪ್ರತಿ 10 ನಿಮಿಷಕ್ಕೆ ಒಂದು ಹೆಣ್ಣಿನ ಕೊಲೆಯಾಗುತ್ತಿದೆ. ಅಂದರೆ ಒಂದು ದಿನದಲ್ಲಿ ಸರಾಸರಿ 137 ಹೆಣ್ಣುಮಕ್ಕಳ ಹತ್ಯೆಯಾಗುತ್ತಿದೆ ಎಂದು ವಿಶ್ವಸಂಸ್ಥೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ವಿಶ್ವಸಂಸ್ಥೆಯ ಮಾದಕವಸ್ತು ಹಾಗೂ ಅಪರಾಧ ಕಚೇರಿ (ಯುಎನ್‌ಒಡಿಸಿ) ಮತ್ತು ವಿಶ್ವಸಂಸ್ಥೆಯ ಮಹಿಳಾ ಘಟಕ, ಸೋಮವಾರ ವರದಿ ಬಿಡುಗಡೆ ಮಾಡಿದ್ದು, ವಿಶ್ವದಾದ್ಯಂತ ವಾರ್ಷಿಕವಾಗಿ 10 ಸಾವಿರದಷ್ಟು ಸ್ತ್ರೀ ಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ವರ್ಷ 83 ಸಾವಿರ ಹೆಣ್ಣುಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ. ಈ ಪ್ರಕರಣಗಳಲ್ಲಿ ಶೇ 50 ರಷ್ಟು ಅಂದರೆ 50 ಸಾವಿರ ಹೆಣ್ಣುಮಕ್ಕಳನ್ನು ಅವರ ಸಂಗಾತಿ ಅಥವಾ ಕುಟುಂಬ ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಇದರರ್ಥ, ಸಂಗಾತಿ ಅಥವಾ ಕುಟುಂಬ ಸದಸ್ಯರಿಂದ ಪ್ರತಿ 10 ನಿಮಿಷಕ್ಕೆ ಒಂದು ಹೆಣ್ಣಿನ ಹತ್ಯೆಯಾಗುತ್ತಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಕಳೆದ ವರ್ಷ ಕೇವಲ ಶೇ 11 ರಷ್ಟು ಪುರುಷರು ಸಂಗಾತಿ ಅಥವಾ ಕುಟುಂಬ ಸದಸ್ಯರಿಂದ ಹತ್ಯೆಯಾಗಿದ್ದಾರೆ. ಜಗತ್ತಿನಲ್ಲಿ ಸ್ವಂತ ಮನೆಯೇ ಹೆಣ್ಣಿಗೆ ಅಪಾಯಕಾರಿಯಾಗಿದೆ ಎಂದು ಯುಎನ್‌ಒಡಿಸಿಯ ಕಾರ್ಯನಿರ್ವಾಹಕ ನಿರ್ದೇಶಕ ಜಾನ್ ಬ್ರಾಂಡೊಲಿನೊ ಹೇಳಿದ್ದಾರೆ.
ಅತಿ ಹೆಚ್ಚು ಸ್ತ್ರೀ ಹತ್ಯೆಯಾಗುತ್ತಿರುವ ಪೈಕಿ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಪ್ರತಿ ವರ್ಷ ಶೇ3 ರಷ್ಟು ಅಂದರೆ 1 ಲಕ್ಷ ಹೆಣ್ಣುಮಕ್ಕಳು ಕೊಲೆಯಾಗುತ್ತಿದ್ದಾರೆ. ನಂತರದ ಸ್ಥಾನಗಳಲ್ಲಿ ಅಮೆರಿಕ (ಶೇ 1.5). ಒಶೇನಿಯಾ (ಶೇ 1.4) ಏಷ್ಯಾ (0.7) ಮತ್ತು ನಂತರದ ಸ್ಥಾನದಲ್ಲಿ ಯುರೋಪ್ (ಶೇ 0.5) ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.