ADVERTISEMENT

ಭಾರತದಲ್ಲಿ ಸುರಕ್ಷಿತವಾಗಿ ಶಾಲೆ ಪುನರಾರಂಭಿಸಲು ನೆರವು ನೀಡುತ್ತಿದೆ ವಿಶ್ವಸಂಸ್ಥೆ

ಪಿಟಿಐ
Published 9 ಏಪ್ರಿಲ್ 2021, 6:45 IST
Last Updated 9 ಏಪ್ರಿಲ್ 2021, 6:45 IST
ಪ್ರಾತಿನಿಧಿಕ ಚಿತ್ರ  (ಪಿಟಿಐ ಚಿತ್ರ)
ಪ್ರಾತಿನಿಧಿಕ ಚಿತ್ರ (ಪಿಟಿಐ ಚಿತ್ರ)   

ವಿಶ್ವಸಂಸ್ಥೆ: ಭಾರತದಲ್ಲಿರುವ ವಿಶ್ವಸಂಸ್ಥೆಯ ತಂಡ ಕೊರೊನಾ ಬಿಕ್ಕಟ್ಟಿನ ನಡುವೆ ದೇಶದಾದ್ಯಂತ ಸುರಕ್ಷಿತವಾಗಿ ಶಾಲೆಗಳನ್ನು ಪುನಃ ಆರಂಭಿಸಲು ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದೆ. ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಆನ್‌ಲೈನ್‌ ಶಿಕ್ಷಣದ ಮೂಲಕ ದುರ್ಬಲ ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳನ್ನು ತಲುಪಲು ಪ್ರಯತ್ನಿಸುತ್ತಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ಭಾರತದ 17 ರಾಜ್ಯಗಳಲ್ಲಿ ಇ–ಕಲಿಕೆಗೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಈ ಕಾರ್ಯಕ್ರಮಗಳ ಮೂಲಕ ಸುಮಾರು 6 ಕೋಟಿ ಮಕ್ಕಳನ್ನು ತಲುಪುತ್ತಿದ್ದು, ಇದರಲ್ಲಿ ಅರ್ಧದಷ್ಟು ಬಾಲಕಿಯರಿದ್ದಾರೆ ಎಂಬುದು ವಿಶೇಷ. ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ 4 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲು ಯುನಿಸೆಫ್‌ ನೆರವಾಗಿದೆ‘ ಎಂದು ಅವರು ವಿವರಿಸಿದರು.

‘ಶಾಲೆಗಳಲ್ಲಿ ಕೋವಿಡ್‌– 19 ಸೋಂಕು ಹರಡುವುದನ್ನು ತಡೆಗಟ್ಟುವ ವಿಷಯದಲ್ಲಿ ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿ 22 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು 50 ಲಕ್ಷ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್‌ಆರ್‌ಎ) 3,400 ಕ್ಕೂ ಹೆಚ್ಚು ನಿರಾಶ್ರಿತ ಮಕ್ಕಳಿಗೆ ಶಿಕ್ಷಣ ನೀಡಲು ನೆರವಾಗಿದ್ದು, ಅವರಿಗೆ ಸುಮಾರು 3,000 ಶಿಕ್ಷಣ ಕಿಟ್‌ಗಳನ್ನು ಪೂರೈಸಿದೆ‘ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.