ADVERTISEMENT

ಭಯೋತ್ಪಾದನೆ ವಿರುದ್ಧ ಹೋರಾಟ: ದ್ವಂದ್ವ ನಿಲುವು ಅಪಾಯಕಾರಿ –ಭಾರತ ಪ್ರತಿಪಾದನೆ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಪ್ರತಿಪಾದನೆ

ಪಿಟಿಐ
Published 23 ಆಗಸ್ಟ್ 2022, 12:31 IST
Last Updated 23 ಆಗಸ್ಟ್ 2022, 12:31 IST
ರುಚಿರಾ ಕಾಂಬೋಜ್‌
ರುಚಿರಾ ಕಾಂಬೋಜ್‌   

ವಿಶ್ವಸಂಸ್ಥೆ: ‘ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ದ್ವಂದ್ವ ನಿಲುವುಗಳನ್ನು ತಳೆಯುವುದು ಅಪಾಯಕಾರಿ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸಭೆಯಲ್ಲಿ ಭಾರತ ಪ್ರತಿಪಾದಿಸಿದೆ.

ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಪರೋಕ್ಷವಾಗಿ ಚೀನಾ ವಿರುದ್ಧ ಚಾಟಿ ಬೀಸಿದರು. ಆಗಸ್ಟ್‌ ತಿಂಗಳಿಗಾಗಿ ಚೀನಾ ದೇಶವು ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿದ್ದು, ಅದರ ಸೂಚನೆಯಂತೆ ಈ ಸಭೆಯನ್ನು ಆಯೋಜಿಸಲಾಗಿದೆ.

‘ಯಥಾಸ್ಥಿತಿಯನ್ನು ಬದಲಿಸುವ ನಿಟ್ಟಿನಲ್ಲಿ ಯಾವುದೇ ದೇಶ ಕೈಗೊಳ್ಳುವ ಬಲವಂತದ ಅಥವಾ ಏಕಪಕ್ಷೀಯ ಕ್ರಮವು ಭದ್ರತೆಗೆ ಸಂಬಂಧಿಸಿ ಜಾಗತಿಕವಾಗಿ ಒಪ್ಪಿಕೊಂಡಿರುವ ತತ್ವಗಳಿಗೆ ಅಗೌರವ ತೋರಿದಂತಾಗಲಿದೆ. ಎಲ್ಲ ದೇಶಗಳು ಪರಸ್ಪರರ ಸಾರ್ವಭೌಮತೆ, ಭೌಗೋಳಿಕ ಸಮಗ್ರತೆ ಹಾಗೂ ಜಾಗತಿಕ ಒಡಂಬಡಿಕೆಗಳನ್ನು ಗೌರವಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಮಾತುಕತೆ ಹಾಗೂ ಸಹಕಾರ ಮೂಲಕ ಸಾಮಾನ್ಯ ಭದ್ರತೆಗೆ ಉತ್ತೇಜನ’ ಎಂಬುದು ಈ ಸಭೆಯ ವಿಷಯವಾಗಿದೆ. ಆದರೆ, ಮಂಡಳಿಯ ಈ ತಿಂಗಳ ಅಧ್ಯಕ್ಷ ಸ್ಥಾನದಲ್ಲಿರುವ ದೇಶದ ಪ್ರಕಾರ ಸಾಮಾನ್ಯ ಭದ್ರತೆ ಎಂಬುದು ಯಾವ ಅಂಶಗಳನ್ನು ಒಳಗೊಂಡಿರುತ್ತದೆ’ ಎಂದು ಕಾಂಬೋಜ್‌ ಪ್ರಶ್ನಿಸಿದರು.

‘ಭಯೋತ್ಪಾದನೆಯಂತಹ ಬೆದರಿಕೆ ವಿರುದ್ಧ ಎಲ್ಲ ದೇಶಗಳು ಒಟ್ಟಾಗಿ ನಿಂತಾಗ ಮಾತ್ರ ಸಾಮಾನ್ಯ ಭದ್ರತೆ ಎಂಬುದಕ್ಕೆ ಅರ್ಥ ಬರುತ್ತದೆ. ಅದು ಕಾರ್ಯಸಾಧುವೂ ಆಗಿರುತ್ತದೆ. ಈ ಕುರಿತು ಇತರರಿಗೆ ಉಪದೇಶ ಮಾಡುವವರು ದ್ವಂದ್ವ ನಿಲುವು ತಳೆಯಬಾರದು’ ಎಂದು ಹೇಳುವ ಮೂಲಕ ಅವರು ಚೀನಾ ಹಾಗೂ ಅದರ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಪ‍ರೋಕ್ಷವಾಗಿ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.