ADVERTISEMENT

ವಿಶ್ವಸಂಸ್ಥೆ; 2ನೇ ಅವಧಿಗೆ ಗುಟೆರೆಸ್‌ ಅವರನ್ನು ಶಿಫಾರಸುಗೈದ ಭದ್ರತಾ ಮಂಡಳಿ

ಪಿಟಿಐ
Published 9 ಜೂನ್ 2021, 2:21 IST
Last Updated 9 ಜೂನ್ 2021, 2:21 IST
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಶಿಫಾರಸು ಮಾಡಿದೆ.

2022ರ ಜನವರಿ 1ರಿಂದ ಐದು ವರ್ಷಗಳ ಅವಧಿಗೆ ಆಂಟೋನಿಯೊ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಭದ್ರತಾ ಮಂಡಳಿಯ 15 ರಾಷ್ಟ್ರಗಳ ಸಭೆಯ ಬಳಿಕ 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎರಡನೇ ಬಾರಿಗೆ ಗುಟೆರೆಸ್ ಅವರ ಹೆಸರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಿಫಾರಸು ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ADVERTISEMENT

ಕಳೆದ ತಿಂಗಳಷ್ಟೇ ಗುಟೆರೆಸ್ ಅಧಿಕಾರವಧಿಯಲ್ಲಿ ಮುಂದುವರಿಯಲು ಮತ್ತವರ ಉಮೇದುವಾರಿಕೆಗೆ ಭಾರತ ಬೆಂಬಲವನ್ನು ಸೂಚಿಸಿತ್ತು. ಈ ಸಂಬಂಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗುಟೆರೆಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ಈ ಬಿಕ್ಕಟ್ಟಿನ ಸಮಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಂದಾಳತ್ವವನ್ನು ಭಾರತ ಗೌರವಿಸುತ್ತದೆ. ಎರಡನೇ ಬಾರಿಗೆ ಗುಟೆರೆಸ್ ಉಮೇದುವಾರಿಕೆಗೆ ಭಾರತದ ಬೆಂಬಲವನ್ನು ಸೂಚಿಸಿದ್ದೇವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದರು.

ವಿಶ್ವಸಂಸ್ಥೆಯ ಒಂಬತ್ತನೇ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಅವರು 2017ರ ಜನವರಿ 1ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಅಧಿಕಾರವಧಿ 2021 ಡಿಸೆಂಬರ್ 31ರಂದು ಕೊನೆಗೊಳ್ಳುತ್ತದೆ.

ಪೋರ್ಚುಗಲ್‌ನ ಮಾಜಿ ಪ್ರಧಾನ ಮಂತ್ರಿ ಆಗಿರುವ ಗುಟೆರೆಸ್, 2005ರಿಂದ 2015ರ ವರೆಗೆ ಒಂದು ದಶಕದ ಕಾಲ ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.

2021 ಜನವರಿ ತಿಂಗಳಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎರಡನೇ ಐದು ವರ್ಷಗಳ ಅವಧಿಗೆ ಸ್ಪರ್ಧಿಸುವುದಾಗಿ ಗುಟೆರೆಸ್ ದೃಢಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.