ADVERTISEMENT

‘ಔಕಸ್‌’ ಮೈತ್ರಿಕೂಟದ ಪರಿಣಾಮ- ಫ್ರಾನ್ಸ್‌ ಕೋಪ ತಣಿಸಲು ಅಮೆರಿಕ ಯತ್ನ

ಏಜೆನ್ಸೀಸ್
Published 6 ಅಕ್ಟೋಬರ್ 2021, 7:14 IST
Last Updated 6 ಅಕ್ಟೋಬರ್ 2021, 7:14 IST
ಆ್ಯಂಟನಿ ಬ್ಲಿಂಕನ್‌
ಆ್ಯಂಟನಿ ಬ್ಲಿಂಕನ್‌   

ಪ್ಯಾರಿಸ್‌: ಇಂಡೊ– ಪೆಸಿಫಿಕ್‌ ಪ್ರದೇಶದಲ್ಲಿ ಚೀನಾವನ್ನು ಎದುರಿಸಲು ಆಸ್ಟ್ರೇಲಿಯಾ, ಬ್ರಿಟನ್‌ನೊಂದಿಗೆ ಅಮೆರಿಕ ರಚಿಸಿಕೊಂಡ ‘ಔಕಸ್‌’ ಭದ್ರತಾ ಮೈತ್ರಿಕೂಟದಿಂದ ಸಿಟ್ಟಾಗಿರುವ ಫ್ರಾನ್ಸ್‌ನ ಕೋಪವನ್ನು ತಣಿಸುವ ನಿಟ್ಟಿನಲ್ಲಿ ಅಮೆರಿಕ ಪ್ರಯತ್ನ ಮುಂದುವರಿಸಿದೆ.

ಇದರ ಭಾಗವಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರು ಪ್ಯಾರಿಸ್‌ ಪ್ರವಾಸ ಕೈಗೊಂಡಿದ್ದು, ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮಾತುಕತೆಯ ಬಳಿಕ ಫ್ರೆಂಚ್‌ ವಾಹಿನಿಗೆ ಸಂದರ್ಶನ ನೀಡಿದ ಬ್ಲಿಂಕನ್‌ ಅವರು, ಈ ನಿಟ್ಟಿನಲ್ಲಿ ಅಮೆರಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಒಪ್ಪಿಕೊಂಡರು. ಅಲ್ಲದೆ ‘ನಾವು ಇನ್ನಷ್ಟು ಉತ್ತಮವಾಗಿ ಸಂವಹನ ನಡೆಸಬೇಕಿತ್ತು’ ಎಂದು ಹೇಳಿದರು.

ADVERTISEMENT

ಮ್ಯಾಕ್ರನ್‌ ಮತ್ತು ಬ್ಲಿಂಕನ್‌ ಅವರು ಇಂಡೊ–ಪೆಸಿಫಿಕ್‌ ಮತ್ತು ಇತರೆ ಪ್ರದೇಶಗಳಲ್ಲಿ ಸಂಭಾವ್ಯ ಅಮೆರಿಕ–ಫ್ರೆಂಚ್‌ ಸಹಕಾರಕ್ಕೆ ಸಂಬಂಧಿಸಿದಂತೆ ಸುಮಾರು 40 ನಿಮಿಷಗಳವರೆಗೆ ಮಾತುಕತೆ ನಡೆಸಿದರು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾಕ್ರನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ತಿಂಗಳಲ್ಲಿ ಭೇಟಿಯಾಗಲಿದ್ದು, ಆ ವೇಳೆ ಘೋಷಿಸಬಹುದಾದ ಜಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಆ ಯೋಜನೆಗಳು ಯಾವುವು ಎಂಬುದರ ಬಗ್ಗೆ ಅವರು ಮಾಹಿತಿ ನೀಡಿಲ್ಲ.

‘ಔಕಸ್‌’ ಮೈತ್ರಿಕೂಟ ರಚನೆಯಿಂದ ಆಸ್ಟ್ರೇಲಿಯಾ ಜತೆಗೆ ಫ್ರಾನ್ಸ್‌ ಮಾಡಿಕೊಂಡಿದ್ದ ಬಹುಕೋಟಿ ಡಾಲರ್‌ಗಳ ಜಲಾಂತರ್ಗಾಮಿ ನೌಕೆ ನಿರ್ಮಾಣ ಒಪ್ಪಂದ ಮುರಿದು ಬಿದ್ದಿತ್ತು. ಇದರಿಂದ ಫ್ರಾನ್ಸ್‌ ಆಕ್ರೋಶಗೊಂಡು, ಅಮೆರಿಕದಲ್ಲಿದ್ದ ತನ್ನ ರಾಯಭಾರಿಯನ್ನು ವಾಪಸ್‌ ಕರೆಸಿಕೊಂಡು ಪ್ರತಿಭಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.