ADVERTISEMENT

100ಕ್ಕೂ ಹೆಚ್ಚು ರಾಷ್ಟ್ರಗಳಿಂದ ನಾಯಿ ತರುವುದಕ್ಕೆ ಅಮೆರಿಕ ನಿಷೇಧ

ಹೆಚ್ಚಿದ ರೇಬಿಸ್‌ ಸೋಂಕು: ಜುಲೈ 14 ರಿಂದ ಒಂದು ವರ್ಷಗಳ ಕಾಲ ನಿರ್ಬಂಧ ಜಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2021, 6:20 IST
Last Updated 15 ಜೂನ್ 2021, 6:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನ್ಯೂಯಾರ್ಕ್‌(ಎಪಿ): ರೇಬಿಸ್‌ ರೋಗ ಹೆಚ್ಚಾಗಿರುವ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳಿಂದ ನಾಯಿಗಳನ್ನು ಅಮೆರಿಕಕ್ಕೆ ತರುವುದಕ್ಕೆ ಒಂದು ವರ್ಷಗಳ ನಿರ್ಬಂಧ ವಿಧಿಸಲಾಗಿದೆ. ಈ ನಿಬಂಧನೆ ಜುಲೈ 14 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕದ ಆರೋಗ್ಯ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಒಂದೊಮ್ಮೆ ಅಂಥ ದೇಶಗಳಿಂದ ತರುವಂತಹ ನಾಯಿಗಳಿಗೆ ಈಗಾಗಲೇ ರೇಬೀಸ್ ಲಸಿಕೆ ಹಾಕಿಸಿರುವ ಕುರಿತು ಪುರಾವೆಯನ್ನು ಒದಗಿಸಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು 'ಎಪಿ' ವರದಿ ಮಾಡಿದೆ.

ಇತ್ತೀಚೆಗೆ ಅಮೆರಿಕಕ್ಕೆ ನಾಯಿಮರಿಗಳನ್ನು ತರುವ ಪ್ರಕ್ರಿಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಈ ಷರತ್ತು ಬದ್ಧ ನಿಬಂಧನೆ ವಿಧಿಸಲಾಗುತ್ತಿದೆ. ಏಕೆಂದರೆ, ನಾಯಿ ಮರಿಗಳಿಗೆ ಲಸಿಕೆ ಹಾಕಿಸುವಷ್ಟು ವಯಸ್ಸಾಗಿರುವುದಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿವೆ.

ಅಮೆರಿಕದ ಆರೋಗ್ಯ ಸಚಿವಾಲಯದ ಈ ಕ್ರಮವನ್ನು ಅಮೆರಿಕದ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡೌಗ್ಲಾಸ್ ಕ್ರಾಟ್ ಶ್ಲಾಘಿಸಿದ್ದಾರೆ. ‘ಅಮೆರಿಕಕ್ಕೆ ಆರೋಗ್ಯವಂತಹ ನಾಯಿಗಳನ್ನು ತರಬೇಕು, ಅದರಲ್ಲೂ ವಿಶೇಷವಾಗಿ ನಾಯಿಮರಿಗಳನ್ನು ತರುವಾಗ ಅವುಗಳ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಬೇಕು‘ ಎಂದು ವಿಸ್ಕಾನ್‌ಸಿನ್‌ನ ಲಾ ಕ್ರಾಸ್‌ನ ಪಶು ತಜ್ಞ ಕ್ರಟ್ಟಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.