ADVERTISEMENT

ರಷ್ಯಾ ಜೊತೆ ಅಂತರ ಕಾಯ್ದುಕೊಳ್ಳಿ: ಭಾರತಕ್ಕೆ ಅಮೆರಿಕ ಸೂಚನೆ

ರಾಯಿಟರ್ಸ್
Published 3 ಮಾರ್ಚ್ 2022, 13:20 IST
Last Updated 3 ಮಾರ್ಚ್ 2022, 13:20 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ವಾಷಿಂಗ್ಟನ್: ತನ್ನ ಪ್ರಮುಖ ಶಸ್ತ್ರಾಸ್ತ್ರಗಳ ಸರಬರಾಜುದಾರ ದೇಶ ರಷ್ಯಾದಿಂದ ಅಂತರ ಕಾಯ್ದುಕೊಳ್ಳುವಂತೆ ಭಾರತಕ್ಕೆ ಅಮೆರಿಕವು ಸೂಚಿಸಿದೆ.

ರಷ್ಯಾದ ಬ್ಯಾಂಕ್‌ಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಂದಾಗಿ ರಷ್ಯಾದಿಂದ ಇತರೆ ದೇಶಗಳು ರಕ್ಷಣಾ ಉಪಕರಣಗಳನ್ನು ಖರೀದಿಸುವುದು ಕಷ್ಟವಾಗಲಿದೆ ಎಂದು ಅಮೆರಿಕದ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ. ಆದರೆ, ಈ ಮೊದಲೇ ರಷ್ಯಾ ಜೊತೆಗೆ ಆಗಿರುವ ಒಪ್ಪಂದದ ಅನ್ವಯ, ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಪಡೆದುಕೊಳ್ಳುವ ಕುರಿತಂತೆ ಭಾರತಕ್ಕೆ ವಿನಾಯಿತಿ ನೀಡುವ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದೂ ಅವರು ಹೇಳಿದ್ದಾರೆ.

2018ರಲ್ಲಿ ರಷ್ಯಾ ಜೊತೆ ಭಾರತವು 5.5 ಬಿಲಿಯನ್ ಡಾಲರ್ ಮೊತ್ತದ ಎಸ್–400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ರಕ್ಷಣಾ ಉಪಕರಣಗಳ ಒಪ್ಪಂದ ಮಾಡಿಕೊಂಡಿದೆ. ರಷ್ಯಾದಿಂದ ಯಾವುದೇ ದೇಶಗಳು ರಕ್ಷಣಾ ಉಪಕರಣ ಖರೀದಿಸದಂತೆ ಜಾರಿಯಲ್ಲಿರುವ ಅಮೆರಿಕ ಕಾನೂನಿನ ನಡುವೆಯೂ ಭಾರತಕ್ಕೆ ಕಳೆದ ವರ್ಷದ ಅಂತ್ಯದಲ್ಲಿ ರಷ್ಯಾದಿಂದ ಸರಬರಾಜು ಆರಂಭವಾಗಿತ್ತು.

ADVERTISEMENT

ಕಳೆದ ವಾರ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕವು ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಿದೆ. ‘ರಷ್ಯಾ ಬ್ಯಾಂಕ್‌ಗಳ ವಿರುದ್ಧ ನಿರ್ಬಂಧಗಳನ್ನು ಹೇರಿರುವುದರಿಂದ ಯಾವುದೇ ದೇಶಕ್ಕೆ ರಷ್ಯಾದಿಂದ ಪ್ರಮುಖ ರಕ್ಷಣಾ ಉಪಕರಣಗಳನ್ನು ಖರೀದಿಸುವುದು ಕಷ್ಟವಾಗಲಿದೆ’ ಎಂದು ದಕ್ಷಿಣ ಏಷ್ಯಾ ವ್ಯವಹಾರಗಳ ಅಮೆರಿಕದ ಸಹ ಕಾರ್ಯದರ್ಶಿ ಡೊನಾಲ್ಡ್ ಲೂ ಸೆನೆಟ್‌ನ ಉಪಸಮಿತಿಗೆ ತಿಳಿಸಿದ್ದಾರೆ.

ಅಮೆರಿಕವು ಈ ಬಗ್ಗೆ ಭಾರತದ ಜೊತೆ ಮಾತುಕತೆ ನಡೆಸಿದ್ದು,‘ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಸಾಮೂಹಿಕವಾಗಿ ಖಂಡಿಸುವ ಪ್ರಾಮುಖ್ಯತೆ ಬಗ್ಗೆ ವಿವರಿಸಿದೆ’ಎಂದು ಅವರು ಹೇಳಿದ್ದಾರೆ.

ಆದರೆ, ರಷ್ಯಾದಿಂದ ರಕ್ಷಣಾ ಉಪಕರಣಗಳನ್ನು ಪಡೆದುಕೊಳ್ಳುವ ವಿಚಾರದಲ್ಲಿ ಭಾರತಕ್ಕೆ ವಿನಾಯಿತಿ ಸಿಗಬಹುದೇ? ಎಂದು ಸೆನೆಟರ್ ಒಬ್ಬರು ಕೇಳಿದ ಪ್ರಶ್ನೆಗೆ, ಈ ಕುರಿತಂತೆ ಅಧ್ಯಕ್ಷರ ನಿರ್ಧಾರದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಲೂ ಉತ್ತರಿಸಿದ್ದಾರೆ.

‘ಆದರೆ, ಭಾರತ ನಮ್ಮ ಪ್ರಮುಖ ಭದ್ರತಾ ಪಾಲುದಾರ ಎಂದು ನಾನು ಹೇಳಬಹುದು, ಮತ್ತು ನಮ್ಮ ಸಹಭಾಗಿತ್ವವನ್ನು ನಾವು ಗೌರವಿಸುತ್ತೇವೆ. ಉಕ್ರೇನ್ ಮೇಲಿನ ದಾಳಿ ಬಳಿಕ ತೀವ್ರ ಟೀಕೆ ಎದುರಿಸುತ್ತಿರುವ ರಷ್ಯಾ ಜೊತೆ ಅಂತರ ಕಾಯ್ದುಕೊಳ್ಳಲು ಇದು ಸೂಕ್ತ ಸಮಯ ಎಂಬುದನ್ನು ಭಾರತ ಅರಿಯಬೇಕು’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.