
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ವಾಷಿಂಗ್ಟನ್: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಉತ್ತಮ ಒಡನಾಟವಿದೆ. ಆ ದೇಶದ ಮಾರುಕಟ್ಟೆಯು ಅಮೆರಿಕದ ಸರಕುಗಳಿಗೆ ತೆರೆದುಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಸರಕುಗಳಿಗೆ ಚೀನಾ ಮಾರುಕಟ್ಟೆ ತೆರೆಯಬಹುದು ಎಂಬ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಟ್ರಂಪ್, 'ಅದು ಸಾಧ್ಯವಾಗಲಿದೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ. ಆದರೆ, ಹೆಚ್ಚಿನ ವಿವರ ನೀಡಿಲ್ಲ.
ಸುಂಕ, ಮಾನವ ಹಕ್ಕುಗಳು, ಜಗತ್ತನ್ನೇ ಕಾಡಿದ ಕೋವಿಡ್–19 ಸಾಂಕ್ರಾಮಿಕದ ಮೂಲ, ಸೈಬರ್ ಭದ್ರತೆ ಮಾತ್ರವಲ್ಲದೆ, ತೈವಾನ್ ಹಾಗೂ ಹಾಂಗ್ ಕಾಂಗ್ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಚೀನಾ, ಉಕ್ರೇನ್ ವಿರುದ್ಧದ ಸಂಘರ್ಷದಲ್ಲಿ ರಷ್ಯಾ ಪರ ಅನುಸರಿಸುತ್ತಿರುವ ನಿಲುವುಗಳು ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸುವಂತೆ ಮಾಡಿವೆ.
ಸುಂಕ ವಾಪಸ್ ಇಲ್ಲ
ವಿವಿಧ ದೇಶಗಳ ಸರಕುಗಳ ಮೇಲೆ ಭಾರಿ ಪ್ರಮಾಣದ ಸುಂಕ ವಿಧಿಸುವ ಆದೇಶವನ್ನು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದರೆ, ಅಮೆರಿಕದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗಲಿವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ತಮ್ಮದೇ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಹಲವು ದೇಶಗಳ ಮೇಲೆ ಭಾರಿ ಪ್ರಮಾಣದಲ್ಲಿ ಸುಂಕ ವಿಧಿಸಿ, ಸಂಗ್ರಹಿಸಿರುವ ಹಣವನ್ನು ಹಿಂತಿರುಗಿಸುವುದು ಕಷ್ಟ' ಎಂದಿದ್ದಾರೆ.
'ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಬಂದರೆ ನಾವು ಗೊಂದಲಕ್ಕೆ ಒಳಗಾಗಬೇಕಾಗುತ್ತದೆ. ಭಾರಿ ಮೊತ್ತವನ್ನು ಮರುಪಾವತಿ ಮಾಡಬೇಕಾಗುತ್ತದೆ. ನಾವು ಯಾರಿಗೆ, ಯಾವಾಗ, ಎಷ್ಟು ಪಾವತಿಸಬೇಕಾಗುತ್ತದೆ ಎಂಬುವುದನ್ನು ಲೆಕ್ಕ ಹಾಕಲು ಎಷ್ಟೋ ವರ್ಷಗಳು ಬೇಕಾಗುತ್ತವೆ' ಎಂದೂ ಹೇಳಿದ್ದಾರೆ.
ಒಂದು ದಿನದ ಹಿಂದಷ್ಟೇ, ಇರಾನ್ ಜೊತೆ ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿಕೊಂಡಿರುವ ರಾಷ್ಟ್ರಗಳ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಇದನ್ನು ಚೀನಾ ಖಂಡಿಸಿತ್ತು.
'ಇರಾನ್ ಜೊತೆ ವ್ಯಾಪಾರ ನಡೆಸುವ ದೇಶಗಳಿಂದ ತಾನು ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಶೇ 25ರಷ್ಟು ಸುಂಕ ವಿಧಿಸಲಾಗುವುದು' ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯು ಇರಾನ್ ಜೊತೆ ವ್ಯಾಪಾರ ನಡೆಸುವ ಪ್ರಮುಖ ದೇಶಗಳಾದ ಭಾರತ ಯುಎಇ ಹಾಗೂ ಚೀನಾ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.