ADVERTISEMENT

ಭಾರತದ ಜೊತೆ ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಅಮೆರಿಕ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 2:28 IST
Last Updated 29 ಜನವರಿ 2026, 2:28 IST
<div class="paragraphs"><p>ಸ್ಕಾಟ್ ಬೆಸೆಂಟ್</p></div>

ಸ್ಕಾಟ್ ಬೆಸೆಂಟ್

   

ವಾಷಿಂಗ್ಟನ್: ಭಾರತದ ಜೊತೆ ಪ್ರಮುಖ ವ್ಯಾಪಾರ ಒಪ್ಪಂದ ಮಾಡಿಕೊಂಡ ಐರೋಪ್ಯ ಒಕ್ಕೂಟವನ್ನು ಟೀಕಿಸಿದ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ತಾನೇ ವ್ಯಕ್ತಪಡಿಸಿದ್ದ ಉಕ್ರೇನ್ ಜನರ ಮೇಲಿನ ಕಾಳಜಿಗಿಂತ ವ್ಯಾಪಾರಕ್ಕೆ ಯುರೋಪ್ ಆದ್ಯತೆ ನೀಡಿರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಸಿಎನ್‌ಬಿಸಿ ಜೊತೆ ಮಾತನಾಡಿರುವ ಬೆಸೆಂಟ್, ಯುರೋಪ್ ನಿರ್ಧಾರದಿಂದ ತೀವ್ರ ಹತಾಶಆಗಿದ್ದೇನೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಶಮನದ ಬದಲಿಗೆ ಯುರೋಪ್ ವ್ಯಾಪಾರವನ್ನು ಆದ್ಯತೆಯಾಗಿ ಪರಿಗಣಿಸಿದೆ ಎಂದಿದ್ದಾರೆ.

ADVERTISEMENT

ಜಾಗತಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಅವಲಂಬನೆ ತಗ್ಗಿಸುವ ದೃಷ್ಟಿಯಿಂದ ಮತ್ತು ದ್ವಿಪಕ್ಷೀಯ ವ್ಯಾಪಾರ ವೃದ್ಧಿಸುವ ದೃಷ್ಟಿಯಿಂದ ಭಾರತದ ಜೊತೆ ಬಹುದಿನಗಳ ವ್ಯಾಪಾರ ಒಪ್ಪಂದವನ್ನು ಯುರೋಪ್ ಪೂರ್ಣಗೊಳಿಸಿದ ನಂತರ ಅಮೆರಿಕದಿಂದ ಈ ಪ್ರತಿಕ್ರಿಯೆ ಬಂದಿದೆ.

ಒಪ್ಪಂದದ ಅನ್ವಯ ಉಭಯ ದೇಶಗಳ ನಡುವೆ ಸರಬರಾಜಾಗುವ ಶೇ 96.6 ವಸ್ತುಗಳ ಮೇಲಿನ ತೆರಿಗೆ ಸಂಪೂರ್ಣ ತೆಗೆದುಹಾಕಲಾಗುತ್ತದೆ ಅಥವಾ ಗಮನಾರ್ಹ ಪ್ರಮಾಣದಲ್ಲಿ ತಗ್ಗಿಸಲಾಗುತ್ತದೆ. ಹಾಗಾಗಿಯೇ ಈ ಒಪ್ಪಂದವನ್ನು ಮುಕ್ತ ವ್ಯಾಪಾರ ಒಪ್ಪಂದವೆಂದು ಕರೆಯಲಾಗಿದೆ.

ಈ ಒಪ್ಪಂದದಿಂದ 2032ರ ವೇಳೆಗೆ ಭಾರತಕ್ಕೆ ಯುರೋಪ್‌ ರಫ್ತು ಪ್ರಮಾಣವು ದುಪ್ಪಟ್ಟಾಗುವ ನಿರೀಕ್ಷೆ ಇದೆ. ಯುರೋಪ್ ಕಂಪನಿಗಳು 4 ಬಿಲಿಯನ್ ಯುರೊ ತೆರಿಗೆ ಉಳಿತಾಯ ಮಾಡಲಿವೆ.

ಕಳೆದ ವರ್ಷ ಭಾರತದ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವ ಅಮೆರಿಕದ ನಿರ್ಧಾರವನ್ನು ಐರೋಪ್ಯ ಒಕ್ಕೂಟವು ಏಕೆ ವಿರೋಧಿಸಿತು ಎಂಬುದನ್ನು ಈ ಒಪ್ಪಂದವು ವಿವರಿಸಿದೆ ಎಂದು ಬೆಸೆಂಟ್ ಹೇಳಿದ್ದಾರೆ.

‘ಯುರೋಪಿಯನ್ನರಿಗೆ ನಮ್ಮೊಂದಿಗೆ ಸೇರಲು ಇಷ್ಟವಿರಲಿಲ್ಲ. ಏಕೆಂದರೆ, ಅವರು ಈ ವ್ಯಾಪಾರ ಒಪ್ಪಂದವನ್ನು ಮಾಡಲು ಬಯಸಿದ್ದರು. ಆದರೆ, ಪ್ರತಿ ಬಾರಿ ಉಕ್ರೇನ್ ಜನರ ಮಹತ್ವದ ಬಗ್ಗೆ ಮಾತನಾಡುತ್ತಿದ್ದ ಯುರೋಪಿಯನ್ನರು ಈಗ ಉಕ್ರೇನ್‌ಗಿಂತ ವ್ಯಾಪಾರಕ್ಕೆ ಆದ್ಯತೆ ನೀಡಿದರು’ ಎಂದು ಅವರು ಆರೋಪಿಸಿದ್ದಾರೆ.

ರಷ್ಯಾದ ಕಚ್ಚಾ ತೈಲದಿಂದ ಪಡೆದ ಸಂಸ್ಕರಿಸಿದ ಇಂಧನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಯುರೋಪ್ ರಾಷ್ಟ್ರಗಳು ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿವೆ ಎಂದೂ ಅವರು ಆರೋಪಿಸಿದರು.

‘ರಷ್ಯಾದ ಕಚ್ಚಾ ತೈಲವು ಭಾರತಕ್ಕೆ ಹೋಗುತ್ತದೆ. ಅಲ್ಲಿ ಸಂಸ್ಕರಿಸಿದ ಉತ್ಪನ್ನಗಳು ಹೊರಬರುತ್ತವೆ. ಯುರೋಪಿಯನ್ನರು ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸುತ್ತಾರೆ. ಈ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.