ADVERTISEMENT

ವಿದೇಶಿ ಪಡೆಗಳು ಅಫ್ಗಾನ್‌ನಿಂದ ನಿರ್ಗಮಿಸಿದರೆ ಐಎಸ್‌ ದಾಳಿ ನಿಲ್ಲಲಿದೆ: ತಾಲಿಬಾನ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 14:48 IST
Last Updated 30 ಆಗಸ್ಟ್ 2021, 14:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್:‌ ಅಮೆರಿಕ ಸೇರಿದಂತೆ ವಿದೇಶಗಳ ಸೇನಾಪಡೆಗಳು ಅಫ್ಗಾನಿಸ್ತಾನದಿಂದ ತೆರಳಿದರೆ ಇಸ್ಲಾಮಿಕ್‌ ಸ್ಟೇಟ್ಸ್‌ (ಐಎಸ್)‌ ಸಂಘಟನೆಯು ದೇಶದಲ್ಲಿ ದಾಳಿ ನಡೆಸುವುದನ್ನು ನಿಲ್ಲಿಸಲಿದೆ ಎಂದು ತಾಲಿಬಾನ್‌ ವಕ್ತಾರ ಜಬಿಹುಲ್ಲಾಹ್ ಮುಜಾಹಿದ್ ಹೇಳಿಕೆ ನೀಡಿದ್ದಾರೆ.

ʼವಿದೇಶಿಗರ ಅನುಪಸ್ಥಿತಿಯಲ್ಲಿ‌ ದೇಶದಲ್ಲಿ ಇಸ್ಲಾಮಿಕ್‌ ಸರ್ಕಾರ ರಚನೆಯಾದರೆ, ಐಎಸ್‌ನಿಂದ ಪ್ರಭಾವಿತರಾದ ಅಫ್ಗನ್ನರು ತಮ್ಮ ಕಾರ್ಯಾಚರಣೆಗಳನ್ನು ನಿಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆʼ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ʼಅವರು (ಐಎಸ್‌) ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿದರೆ ಮತ್ತು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದರೆ, ಇಸ್ಲಾಂ ಸರ್ಕಾರವು ಅವರೊಂದಿಗೆ ವ್ಯವಹರಿಸಲಿದೆʼ ಎಂದೂ ತಿಳಿಸಿದ್ದಾರೆ.

ADVERTISEMENT

ಐಎಸ್‌ ಉಗ್ರರು ಕಾಬೂಲ್‌ ವಿಮಾನ ನಿಲ್ದಾಣದ ಸಮೀಪ ಗುರುವಾರ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ್ದರು. ಈ ವೇಳೆ ಅಮೆರಿಕದ 13 ಸೈನಿಕರು ಸೇರಿದಂತೆ 180 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಯುಎಸ್‌ ಸೇನೆಯೂ ಐಎಸ್‌ ಉಗ್ರರನ್ನು ಗುರಿಯಾಗಿರಿಸಿ ಕಳೆದ ಕೆಲವು ದಿನಗಳಿಂದ ದಾಳಿ ನಡೆಸುತ್ತಿದೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಬೂಲ್‌ ವಿಮಾನ ನಿಲ್ದಾಣದ ಸಮೀಪ ದಾಳಿ ನಡೆಸಲು ಸಜ್ಜಾಗಿದ್ದ ಐಎಸ್‌ ಉಗ್ರರ ವಾಹನವೊಂದರ ಮೇಲೆ ಭಾನುವಾರ ಡ್ರೋನ್‌ ದಾಳಿ ನಡೆಸಿರುವುದಾಗಿ ಅಮೆರಿಕ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.