
ವಾಷಿಂಗ್ಟನ್: ಅಲ್ಪಾವಧಿಗೆ ಅಗತ್ಯವಿದ್ದ ವೆಚ್ಚ ಮಸೂದೆಗೆ ಅನುಮೋದನೆ ದೊರೆಯುವ ಸಾಧ್ಯತೆ ಇದ್ದು, ಕಳೆದ 43 ದಿನಗಳಿಂದ ಕಂಡುಬಂದಿದ್ದ ಆಡಳಿತ ಬಿಕ್ಕಟ್ಟು ಅಂತ್ಯವಾಗಲಿದೆ.
ಇದರೊಂದಿಗೆ, ವಿವಿಧ ಇಲಾಖೆಗಳು ಅಲ್ಪಾವಧಿಗೆ ಕಾರ್ಯ ನಿರ್ವಹಿಸಲು ಅಗತ್ಯವಿರುವ ಅನುದಾನ ದೊರೆಯಲಿದೆ. ಆದರೆ, ಮಸೂದೆಗೆ ಅನುಮೋದನೆ ನೀಡುವ ವಿಚಾರದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕಾಗಲಿ ಅಥವಾ ರಿಪಬ್ಲಿಕನ್ ಪಕ್ಷಕ್ಕಾಗಲಿ ಗೆದ್ದು ಬೀಗುವಂತಹ ಸ್ಥಿತಿ ಇಲ್ಲವಾಗಿದೆ.
ಸೆನೆಟ್‌ನ ಧನವಿನಿಯೋಗ ಸಮಿತಿ ಸಿದ್ಧಪಡಿಸಿರುವ ಮಸೂದೆಗೆ ಅನುಮೋದನೆ ನೀಡಿದ್ದರಿಂದಾಗಿ, ಆಹಾರಕ್ಕೆ ನೆರವು, ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಶಾಸಕಾಂಗ ಕಾರ್ಯಗಳಿಗೆ ಜನವರಿಗೆ ವರೆಗೆ ಅನುದಾನ ನೀಡುವುದು ಸಾಧ್ಯವಾಗಲಿದೆ.
ಆರೋಗ್ಯ ವಿಮೆಗೆ ಸಂಬಂಧಿಸಿ ಅಲ್ಪಾವಧಿಗೆ ಅನುದಾನ ನೀಡಬೇಕು ಎಂಬ ಡೆಮಾಕ್ರಟಿಕ್ ಸಂಸದರ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ.
‘ಆರೋಗ್ಯ ಸೇವೆಗಳಿಗೆ ಅಮೆರಿಕ ಕುಟುಂಬಗಳು ದುಪ್ಪಟ್ಟು ವೆಚ್ಚ ಮಾಡಬೇಕಾಗುತ್ತದೆ. ಜನರು ಇಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿರಲಿಲ್ಲ’ ಎಂದು ಸೆನೆಟ್‌ನಲ್ಲಿ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ಪ್ರತಿಕ್ರಿಯಿಸಿದ್ದಾರೆ.
ಆಡಳಿತದಲ್ಲಿ ತಲೆದೋರಿರುವ ಬಿಕ್ಕಟ್ಟು ಶಮನಕ್ಕಾಗಿ ಮಾತುಕತೆಗೆ ಬರುವಂತೆ ಡೆಮಾಕ್ರಟಿಕ್ ಪಕ್ಷದ ಸಂಸದರು ನೀಡಿದ ಆಹ್ವಾನವನ್ನು ತಿರಸ್ಕರಿಸಿದ ರಿಪಬ್ಲಿಕನ್ನರು, ವೆಚ್ಚ ಮಸೂದೆಗೆ ಮೊದಲು ಅನುಮೋದನೆ ಸಿಗಬೇಕು ಎಂದು ಪಟ್ಟು ಹಿಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.