ADVERTISEMENT

ಭಾರತಕ್ಕೆ ನೆರವು ನೀಡುವುದು ಅಮೆರಿಕದ ನೈತಿಕ ಜವಾಬ್ದಾರಿ: ಪ್ರಮಿಳಾ ಜಯಪಾಲ್‌

ಕೋವಿಡ್‌–19 ನಿಯಂತ್ರಿಸಲು ಸಹಾಯ

ಪಿಟಿಐ
Published 7 ಮೇ 2021, 6:33 IST
Last Updated 7 ಮೇ 2021, 6:33 IST
ಪ್ರಮೀಳಾ ಜಯಪಾಲ್‌
ಪ್ರಮೀಳಾ ಜಯಪಾಲ್‌   

ವಾಷಿಂಗ್ಟನ್‌: ‘ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸಲು ಭಾರತಕ್ಕೆ ನೆರವು ನೀಡುವುದು ಅಮೆರಿಕದ ನೈತಿಕ ಜವಾಬ್ದಾರಿಯಾಗಿದೆ’ ಎಂದು ಭಾರತೀಯ–ಅಮೆರಿಕನ್‌ ಸಂಸದೆ ಪ್ರಮೀಳಾ ಜಯಪಾಲ್‌ ಹೇಳಿದ್ದಾರೆ.

‘ಭಾರತದಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಪ್ರತಿ ದಿನ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗುತ್ತಿಲ್ಲ. ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜನರು ವೈದ್ಯರನ್ನು ಸಂಪರ್ಕಿಸುವ ಮೊದಲೇ ಸಾವಿಗೀಡಾಗುವ ಸ್ಥಿತಿಗೆ ತಲುಪುತ್ತಿದ್ದಾರೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಭಾರತಕ್ಕೆ ನಮ್ಮ ನೆರವು ಅಗತ್ಯವಾಗಿದೆ. ಅಂತರರಾಷ್ಟ್ರೀಯ ಮಟದಲ್ಲಿ ಇರಬಹುದು ಅಥವಾ ಸ್ಥಳೀಯವಾಗಿ ಇರಬಹುದು ಸಹಾಯ ಹಸ್ತ ಚಾಚುವುದು ನಮ್ಮ ನೈತಿಕ ಜವಾಬ್ದಾರಿ’ ಎಂದು ಹೇಳಿದ್ದಾರೆ.

ADVERTISEMENT

‘ಲಸಿಕೆ ತಯಾರಿಸಲು ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಒದಗಿಸುವಂತೆ ಭಾರತದ ಮನವಿಯನ್ನು ಪರಿಗಣಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮನವಿ ಮಾಡಿದ್ದೇನೆ. ಜತೆಗೆ, ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಪೆಟೆಂಟ್‌ ರಕ್ಷಣೆಯಿಂದ ವಿನಾಯಿತಿ ನೀಡುವ ಪ್ರಸ್ತಾವನೆಗೆ ಬೆಂಬಲ ನೀಡುವಂತೆ ಬೈಡನ್‌ ಆಡಳಿತಕ್ಕೆ ಕೋರಿದ್ದೇನೆ’ ಎಂದು ಹೇಳಿದ್ದಾರೆ.

ಕೋವಿಡ್‌–19 ಸೋಂಕಿಗೆ ಒಳಗಾಗಿದ್ದ ತಮ್ಮ ತಂದೆ–ತಾಯಿಯ ಯೋಗಕ್ಷೇಮ ವಿಚಾರಿಸಲು ಜಯಪಾಲ್‌ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.