ADVERTISEMENT

ಡೊನಾಲ್ಡ್‌ ಟ್ರಂಪ್‌ ವಿರುದ್ಧ ವಾಗ್ದಂಡನೆಗೆ ವೇದಿಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 19:38 IST
Last Updated 13 ಜನವರಿ 2021, 19:38 IST
ಟೆಕ್ಸಾಸ್‌ನಲ್ಲಿ ಮಂಗಳವಾರ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಟ್ರಂಪ್‌, ತಮ್ಮ ಬೆಂಬಲಿಗರತ್ತ ಕೈ ಬೀಸಿದರು–ಎಎಫ್‌ಪಿ ಚಿತ್ರ
ಟೆಕ್ಸಾಸ್‌ನಲ್ಲಿ ಮಂಗಳವಾರ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಟ್ರಂಪ್‌, ತಮ್ಮ ಬೆಂಬಲಿಗರತ್ತ ಕೈ ಬೀಸಿದರು–ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌:

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡನೇ ಬಾರಿಗೆ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಬುಧವಾರ ಜನಪ್ರತಿನಿಧಿಗಳ ಸಭೆಯಲ್ಲಿ(ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌) ವಾಗ್ದಂಡನೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಂಸತ್‌ ಭವನದ (ಕ್ಯಾಪಿಟಲ್‌ ಹಿಲ್‌) ಮೇಲೆ ಟ್ರಂಪ್‌ ಬೆಂಬಲಿಗರು ಕಳೆದ ವಾರ ನಡೆಸಿದ ದಾಳಿ ಹಿನ್ನೆಲೆಯಲ್ಲಿ ಈ ವಾಗ್ದಂಡನೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಂವಿಧಾನದ 25ನೇ ತಿದ್ದುಪಡಿಯ ಅಡಿಯಲ್ಲಿ ಟ್ರಂಪ್‌ ಅವರನ್ನು ಪದಚ್ಯುತಗೊಳಿಸಲು ಸಾಧ್ಯವಿಲ್ಲ ಎಂದು ಉಪಾಧ್ಯಕ್ಷ ಮೈಕ್‌ ಪೆನ್ಸ್ ಅವರು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಉಪಾಧ್ಯಕ್ಷರ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಮಂಗಳವಾರ ರಾತ್ರಿ ಸಂಸತ್‌ನಲ್ಲಿ ಮತಕ್ಕೆ ಹಾಕಲಾಗಿತ್ತು. 223 ಮಂದಿ ನಿರ್ಣಯದ ಪರ ಮತ ಚಲಾಯಿಸಿದರು.

ADVERTISEMENT

ಜಾನ್‌ ಎಫ್‌ ಕೆನಡಿ ಅವರ ಹತ್ಯೆಯ ಬಳಿಕ 25ನೇ ತಿದ್ದುಪಡಿಯನ್ನು ಸಂವಿಧಾನದಲ್ಲಿ ಅಳವಡಿಸಲಾಗಿತ್ತು. ಅಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲರಾದರೆ ಅವರನ್ನು ಉಪಾಧ್ಯಕ್ಷರು ಆ ಸ್ಥಾನದಿಂದ ಕೆಳಗಿಳಿಸಬಹುದು. ಈ ತಿದ್ದುಪಡಿಯು ಉಪಾಧ್ಯಕ್ಷರಿಗೆ ಆ ಅಧಿಕಾರ ನೀಡುತ್ತದೆ. ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ಗಳು ಕೈಗೊಂಡಿರುವ ವಾಗ್ದಂಡನೆ ನಿರ್ಣಯಕ್ಕೆ ರಿಪಬ್ಲಿಕನ್‌ ಪಕ್ಷದ ಐವರು ಸೆನೆಟರ್‌ಗಳು ಬೆಂಬಲ ಸೂಚಿಸಿದ್ದಾರೆ.

‘ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿ ನಡೆಸುವಂತೆ ಟ್ರಂಪ್‌ ತಮ್ಮ ಬೆಂಬಲಿಗರಿಗೆ ಕರೆ ನೀಡಿದರು. ಜೊತೆಗೆ ಗಲಭೆಗೆ ಪ್ರಚೋದನೆಯನ್ನೂ ನೀಡಿದರು. ಅವರ ವಿರುದ್ಧದ ವಾಗ್ದಂಡನೆ ನಿರ್ಣಯವನ್ನು ನಾನು ಬೆಂಬಲಿಸುತ್ತೇನೆ’ ಎಂದು ರಿಪಬ್ಲಿಕನ್‌ ಪಕ್ಷದ ಸೆನೆಟರ್‌ ಲಿಜ್‌ ಚೆನಯ್‌ ಹೇಳಿದ್ದಾರೆ. ರಿಪಬ್ಲಿಕನ್‌ ಪಕ್ಷದ ಇತರ ಸೆನೆಟರ್‌ಗಳಾದ ಜೆಮಿ ಹೆರೆರಾ ಬೀಟ್ಲರ್‌, ಜಾನ್‌ ಕಾಟ್ಕೊ, ಆ್ಯಡಮ್‌ ಕಿಂಜಿಗರ್‌ ಮತ್ತು ಫ್ರೆಡ್‌ ಉಪ್ಟನ್‌ ಅವರೂ ವಾಗ್ದಂಡನೆಯ ಪರ ಒಲವು ತೋರಿದ್ದಾರೆ.

‘ಇದು ನಮ್ಮ ಪಕ್ಷದ ಪ್ರತಿಷ್ಠೆಯ ವಿಷಯ. ಹೀಗಾಗಿ ಎಲ್ಲರೂ ವಾಗ್ದಂಡನೆಯ ವಿರುದ್ಧವಾಗಿ ಮತ ಚಲಾಯಿಸಬೇಕು’ ಎಂದು ರಿಪಬ್ಲಿಕನ್‌ ಪಕ್ಷದ ನಾಯಕರು ಕರೆ ನೀಡಿದ್ದಾರೆ.

‘ಹಿಂಸೆ ಬೇಡ’: ಜನಪ್ರತಿನಿಧಿಗಳ ಸಭೆಯಲ್ಲಿ ವಾಗ್ದಂಡನೆ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ‘ಬೆಂಬಲಿಗರು ಶಾಂತಿಯಿಂದ ಇರಬೇಕು. ಯಾವುದೇ ಹಿಂಸೆಯನ್ನು ನಾನು ವಿರೋಧಿಸುತ್ತೇನೆ’ ಎಂದು ಟ್ರಂಪ್‌ ಹೇಳಿದ್ದಾರೆ. ‘ಮತ್ತಷ್ಟು ಪ್ರತಿಭಟನೆಗಳು ನಡೆಯುವ ವರದಿ ದೊರಕಿದ್ದು, ಯಾವುದೇ ಗಲಭೆ, ಹಿಂಸೆ ನಡೆಯಬಾರದು. ಇಂಥ ಘಟನೆಗಳ ಪರವಾಗಿ ನಾನಿಲ್ಲ’ ಎಂದು ಪ್ರಕಟಣೆಯಲ್ಲಿ ಟ್ರಂಪ್‌ ಹೇಳಿದ್ದಾರೆ.

‘ಟ್ರಂಪ್‌ ಅಮೆರಿಕಕ್ಕೆ ಅಪಾಯ’

‘ಟ್ರಂಪ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು. ನಾವೆಲ್ಲರೂ ಪ್ರೀತಿಸುವ ರಾಷ್ಟ್ರಕ್ಕೆ, ಟ್ರಂಪ್‌ ಪ್ರಸ್ತುತ ಇರುವ ಅಪಾಯ’ ಎಂದು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಟೀಕಿಸಿದರು.

ವಾಗ್ದಂಡನೆ ಕುರಿತ ಚರ್ಚೆ ವೇಳೆ ಮಾತನಾಡಿದ ಪೆಲೋಸಿ, ‘ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಿಂದ ಹಿಡಿದು, ಇಲ್ಲಿಯವರೆಗೂ ಚುನಾವಣಾ ಫಲಿತಾಂಶದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಜೋ ಬೈಡನ್‌ ಅವರ ಗೆಲುವನ್ನು ತಿರುಚಲೂ ಅಸಾಂವಿಧಾನಿಕವಾಗಿ ಪ್ರಯತ್ನಿಸಿದ್ದಾರೆ’ ಎಂದರು.

ವಾಗ್ದಂಡನೆ ನಂತರ ಮುಂದೇನು?

ಜನಪ್ರತಿನಿಧಿಗಳ ಸಭೆಯಲ್ಲಿ ವಾಗ್ದಂಡನೆ ನಿರ್ಣಯ ಅಂಗೀಕಾರವಾದ ಬಳಿಕ, ಇದನ್ನು ವಿಚಾರಣೆಗಾಗಿ ಸೆನೆಟ್‌ಗೆ ಕಳುಹಿಸಲಾಗುತ್ತದೆ. ಕಳೆದ ಬಾರಿ ಅಧಿಕಾರ ದುರ್ಬಳಕೆ ಆರೋಪದಡಿ ಟ್ರಂಪ್‌ ವಾಗ್ದಂಡನೆಗೆ ಗುರಿಯಾಗಿದ್ದರು. ಸೆನೆಟ್‌ನಲ್ಲಿ ಟ್ರಂಪ್‌ ಪ್ರತಿನಿಧಿಸುವ ರಿಪಬ್ಲಿಕನ್‌ ಪಕ್ಷಕ್ಕೆ ಬಹುಮತವಿದ್ದ ಕಾರಣ ಟ್ರಂಪ್‌ಗೆ ಗೆಲುವಾಯಿತು.

ಆದರೆ ಈ ಬಾರಿ ಜ.19ರವರೆಗೆ ಸೆನೆಟ್‌ ಆರಂಭವಾಗುವುದಿಲ್ಲ. ಜ.20ರವರೆಗೆ ವಿಚಾರಣೆ ಆರಂಭಿಸಲು ಸಾಧ್ಯವಿಲ್ಲ ಎಂದು ರಿಪಬ್ಲಿಕನ್‌ ಪಕ್ಷದ ನಾಯಕ ಮಿಚ್‌ ಮೆಕ್‌ಕನೆಲ್‌ ಹೇಳಿದ್ದಾರೆ. ಜ.20ರಂದು ಅಧ್ಯಕ್ಷ ಸ್ಥಾನದಿಂದ ಟ್ರಂಪ್‌ ಕೆಳಗಿಳಿಯಲಿದ್ದಾರೆ. ತಕ್ಷಣದಲ್ಲೇ ಸೆನೆಟ್‌ ಆರಂಭಿಸಲು ಎಲ್ಲ ಸದಸ್ಯರ ಅನುಮತಿ ಬೇಕಾಗಿದ್ದು, ಇದು ದೊರೆಯುವುದು ಅನುಮಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.