
ಮಿನಿಯಾಪೊಲಿಸ್‌ನಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು
ಎಎಫ್‌ಪಿ ಚಿತ್ರ
ಮಿನಿಯಾಪೊಲಿಸ್: ಅಮೆರಿಕದ ವಲಸೆ ಅಧಿಕಾರಿಗಳು ಶನಿವಾರ ಮಿನಿಯಾಪೊಲಿಸ್‌ನಲ್ಲಿ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಕೊಂದಿದ್ದಾರೆ. ಈ ತಿಂಗಳಲ್ಲಿ ಎರಡನೇ ಬಾರಿ ಇಂತಹ ಘಟನೆ ನಡೆದಿದ್ದು, ವಲಸೆ ಅಧಿಕಾರಿಗಳ ಕ್ರಮದ ವಿರುದ್ಧ ಸ್ಥಳೀಯರು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಮೃತರನ್ನು ಅಮೆರಿಕದ ಪ್ರಜೆ 37 ವರ್ಷದ ಅಲೆಕ್ಸ್ ಪ್ರೆಟಿ ಎಂದು ಗುರುತಿಸಲಾಗಿದೆ. ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮದ ಭಾಗವಾಗಿ ಅಧಿಕಾರಿಗಳು ಕಳೆದ ಕೆಲ ದಿನಗಳಿಂದ ಮಿನಿಯಾಪೊಲಿಸ್‌ನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
‘ವ್ಯಕ್ತಿಯೊಬ್ಬ ಕೈಯಲ್ಲಿ ಹ್ಯಾಂಡ್‌ಗನ್ ಹಿಡಿದು ವಲಸೆ ಅಧಿಕಾರಿಗಳ ಹತ್ತಿರ ಧಾವಿಸಿ ಬಂದಿದ್ದಾನೆ. ಅಧಿಕಾರಿಗಳು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದಾಗ ಆತ ಮೃತಪಟ್ಟಿದ್ದಾನೆ’ ಎಂದು ಮಿನಿಯಾಪೊಲಿಸ್ ನಗರದ ಪೊಲೀಸ್ ಮುಖ್ಯಸ್ಥ ಬ್ರಯನ್ ಒ’ಹರಾ ಹೇಳಿದ್ದಾರೆ.
ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಲೆಕ್ಸ್ ಕೈಯಲ್ಲಿ ಫೋನ್ ಹಿಡಿದುಕೊಂಡಿರುವುದು ವಿಡಿಯೊದಲ್ಲಿದೆ. ಅವರು ಕೈಯಲ್ಲಿ ಹ್ಯಾಂಡ್‌ಗನ್ ಹಿಡಿದುಕೊಂಡಿರಲಿಲ್ಲ.
ವಲಸೆ ಅಧಿಕಾರಿಗಳು ಪ್ರತಿಭಟನಾನಿರತ ಮಹಿಳೆಯೊಬ್ಬರನ್ನು ದೂರಕ್ಕೆ ತಳ್ಳಿದಾಗ ಆಕೆಯ ನೆರವಿಗೆ ಅಲೆಕ್ಸ್ ಧಾವಿಸಿದ್ದಾರೆ. ಅಲ್ಲಿದ್ದ ಅಧಿಕಾರಿಗಳು ಅವರನ್ನು ನೆಲಕ್ಕೆ ಉರುಳಿಸಿ ಸಮೀಪದಿಂದಲೇ ಗುಂಡು ಹಾರಿಸುತ್ತಿರುವುದು ವಿಡಿಯೊದಲ್ಲಿದೆ.
ಈ ಘಟನೆಯ ಬೆನ್ನಲ್ಲೇ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮಿನೆಸೊಟಾ ನ್ಯಾಷನಲ್ ಗಾರ್ಡ್ ಸಿಬ್ಬಂದಿಯು ಸ್ಥಳೀಯ ಪೊಲೀಸರಿಗೆ ನೆರವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.